ಅಹಮದಾಬಾದ್: ಗುಜರಾತ್ ವಿಶ್ವವಿದ್ಯಾಲಯದ ಹಾಸ್ಟೆಲ್ ತೊರೆಯುವಂತೆ ಅಫ್ಗಾನಿಸ್ತಾನದ ಆರು ವಿದ್ಯಾರ್ಥಿಗಳು ಮತ್ತು ಪೂರ್ವ ಆಫ್ರಿಕಾದ ಒಬ್ಬ ವಿದ್ಯಾರ್ಥಿಗೆ ಸೂಚನೆ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿಶ್ವವಿದ್ಯಾಲಯದ ಹಾಸ್ಟೆಲ್ ಆವರಣದಲ್ಲಿ ನಮಾಜ್ ಮಾಡಿದ ವಿದೇಶಿ ವಿದ್ಯಾರ್ಥಿಗಳ ಮೇಲೆ ಮಾರ್ಚ್ 16ರಂದು ಹಲ್ಲೆ ನಡೆದಿತ್ತು.
'ವಿದ್ಯಾರ್ಥಿಗಳು ನಿಗದಿಪಡಿಸಿದ್ದ ಅವಧಿ ಮೀರಿ ಹಾಸ್ಟೆಲ್‌ನಲ್ಲಿ ಉಳಿದುಕೊಂಡಿದ್ದರು. ಈ ಏಳು ವಿದೇಶಿ ವಿದ್ಯಾರ್ಥಿಗಳ ಶಿಕ್ಷಣವು ಪೂರ್ಣಗೊಂಡಿದ್ದು, ಕೆಲ ಆಡಳಿತಾತ್ಮಕ ಕಾರ್ಯಗಳಿಗೆ ಬಾಕಿ ಇರುವುದರಿಂದ ಅವರು ವಸತಿನಿಲಯದಲ್ಲೇ ಉಳಿದುಕೊಂಡಿದ್ದರು. ಅವರು ಇನ್ನೂ ಇಲ್ಲಿ ಉಳಿದುಕೊಳ್ಳುವ ಅಗತ್ಯವಿಲ್ಲದಿರುವುದರಿಂದ ಅವರ ತಾಯ್ನಾಡಿಗೆ ಮರಳಲು ಬೇಕಾದ ವ್ಯವಸ್ಥೆಯನ್ನು ಮಾಡಲಾಗಿದೆ' ಎಂದು ವಿಶ್ವವಿದ್ಯಾಲಯದ ಕುಲಪತಿಗಳಾದ ನೀರ್ಜ ಗುಪ್ತಾ ಅವರು ತಿಳಿಸಿದ್ದಾರೆ.
'ವಿದ್ಯಾರ್ಥಿಗಳು ಸುರಕ್ಷಿತವಾಗಿ ತಮ್ಮ ದೇಶಕ್ಕೆ ಮರಳಲು ಬೇಕಾದ ದಾಖಲೆಗಳ ವ್ಯವಸ್ಥೆಯನ್ನು ಮಾಡಲಾಗಿದೆ. ಹಳೆಯ ವಿದ್ಯಾರ್ಥಿಗಳನ್ನು ವಸತಿನಿಲಯದಲ್ಲಿ ಉಳಿಸಿಕೊಳ್ಳಲು ನಾವು ಬಯಸುವುದಿಲ್ಲ. ಆಯಾ ದೇಶದ ಕನ್ಸುಲೇಟ್‌ಗಳಿಗೂ ಮಾಹಿತಿ ನೀಡಲಾಗಿದೆ' ಎಂದು ಹೇಳಿದ್ದಾರೆ.
ಮಾರ್ಚ್ 16ರ ಘಟನೆಯ ಬಳಿಕ ಅಫ್ಗನ್ ಮತ್ತು ಗ್ಯಾಂಬಿಯಾ ಪ್ರತಿನಿಧಿಗಳು ಗುಜರಾತ್ ವಿಶ್ವವಿದ್ಯಾಲಯಕ್ಕೆ ಆಗಮಿಸಿ, ವಿದ್ಯಾರ್ಥಿಗಳ ಸುರಕ್ಷತೆ ಬಗ್ಗೆ ಕುಲಪತಿಗಳ ಜತೆ ಸಭೆ ನಡೆಸಿದ್ದಾರೆ.
ಮಾರ್ಚ್ 16ರಂದು ಸುಮಾರು 12 ಜನರು ವಿಶ್ವವಿದ್ಯಾಲಯದ ವಸತಿ ನಿಲಯಕ್ಕೆ ನುಗ್ಗಿ, ಪ್ರಾರ್ಥನೆ ಮಾಡುತ್ತಿದ್ದ ವಿದೇಶಿ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ್ದರು. ಈ ಘಟನೆಯಿಂದಾಗಿ ಶ್ರೀಲಂಕಾ ಮತ್ತು ತಜೀಕಿಸ್ತಾನದ ಇಬ್ಬರು ವಿದ್ಯಾರ್ಥಿಗಳು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.