ನವದೆಹಲಿ: 7 ನೇ ವೇತನ ಆಯೋಗದ ಪ್ರಕಾರ ಮಾರ್ಚ್ 2024 ರಲ್ಲಿ ಕೇಂದ್ರ ಸರ್ಕಾರವು ಸರ್ಕಾರಿ ನೌಕರರ ತುಟ್ಟಿಭತ್ಯೆಯನ್ನು 4% ರಷ್ಟು ಹೆಚ್ಚಿಸಿದ್ದರೂ ಸಹ, ಅವರು ಕಳೆದ ತಿಂಗಳು ಅವರ ಪರಿಷ್ಕೃತ ವೇತನವನ್ನು ಪಡೆದಿಲ್ಲ. ಈಗ ಬಂದಿರುವ ಅಪ್‌ಡೇಟ್ ಪ್ರಕಾರ ಏರಿಕೆಯಾಗಿರುವ ಸಂಬಳದ 3 ತಿಂಗಳ ಬಾಕಿಯೊಂದಿಗೆ ಏಪ್ರಿಲ್ ಸಂಬಳದಲ್ಲಿಯೇ ಅವರ ಖಾತೆಗೆ ಜಮಾ ಆಗಲಿದೆ ಎಂದು ನ್ಯೂಸ್ 18 ರ ವರದಿ ತಿಳಿಸಿದೆ.
ಸರ್ಕಾರಿ ನೌಕರರಿಗೆ ಡಿಎ ನೀಡಿದರೆ, ಪಿಂಚಣಿದಾರರಿಗೆ ಡಿಆರ್ ನೀಡಲಾಗುತ್ತದೆ. ಜನವರಿ ಮತ್ತು ಜುಲೈನಿಂದ ಜಾರಿಗೆ ಬರುವಂತೆ ವರ್ಷಕ್ಕೆ ಎರಡು ಬಾರಿ ಡಿಎ ಮತ್ತು ಡಿಆರ್ ಅನ್ನು ಹೆಚ್ಚಿಸಲಾಗುತ್ತದೆ. ಡಿಎ ಹೆಚ್ಚಳವನ್ನು ಘೋಷಿಸುವಾಗ, ಮಾರ್ಚ್ ತಿಂಗಳ ಸಂಬಳ ವಿತರಣೆಯ ಮೊದಲು ಬಾಕಿ ಪಾವತಿಸುವುದಿಲ್ಲ ಎಂದು ಸರ್ಕಾರ ಕಳೆದ ತಿಂಗಳು ಘೋಷಿಸಿತ್ತು.
"ಮಾರ್ಚ್ 2024 ರ ಸಂಬಳದ ವಿತರಣೆಯ ದಿನಾಂಕದ ಮೊದಲು ತುಟ್ಟಿಭತ್ಯೆಯ ಬಾಕಿ ಪಾವತಿಯನ್ನು ಮಾಡಲಾಗುವುದಿಲ್ಲ" ಎಂದು ಸರ್ಕಾರವು ಬಿಡುಗಡೆ ಮಾಡಿದ ಆಫೀಸ್ ಮೆಮೊರಾಂಡಮ್ ಮಾಹಿತಿ ನೀಡಿದೆ. ಮಾರ್ಚ್ 7 ರಂದು, ಕೇಂದ್ರ ಸಚಿವ ಸಂಪುಟವು ತುಟ್ಟಿಭತ್ಯೆಯನ್ನು (ಡಿಎ) ಮೂಲ ವೇತನದ ಶೇಕಡಾ 50 ಕ್ಕೆ 4% ಹೆಚ್ಚಳಕ್ಕೆ ಅನುಮೋದಿಸಿತು.
ಒಂದು ಕೋಟಿಗೂ ಹೆಚ್ಚು ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಈ ಡಿಎ ಹೆಚ್ಚಳ ಪ್ರಯೋಜನವನ್ನು ನೀಡುತ್ತದೆ. 4% ಡಿಎ ಹೆಚ್ಚಳವು ಜನವರಿ 1, 2024 ರಿಂದ ಜಾರಿಗೆ ಬಂದಿದೆ. ಇದರ ಹೊರತಾಗಿ, ಉದ್ಯೋಗಿಗಳಿಗೆ ಎಚ್‌ಆರ್‌ಎ ಅನ್ನು ಹೆಚ್ಚಿಸಲಾಗಿದೆ. ಡಿಎ ಹೆಚ್ಚಳದಿಂದ ಬೊಕ್ಕಸಕ್ಕೆ 12,868 ಕೋಟಿ ರೂಪಾಯಿ ಹೆಚ್ಚುವರಿ ಹೊರೆಯಾಗಲಿದೆ.
ಡಿಎ ಮತ್ತು ಡಿಆರ್ ಎಂದರೇನು?
ಹಾಲಿ ಇರುವ ಸರ್ಕಾರಿ ನೌಕರರಿಗೆ ಡಿಎ ನೀಡಿದರೆ, ಪಿಂಚಣಿದಾರರಿಗೆ ಡಿಆರ್ ನೀಡಲಾಗುತ್ತದೆ. ಸಾಮಾನ್ಯವಾಗಿ ಡಿಎ ಮತ್ತು ಡಿಆರ್ ಅನ್ನು ವರ್ಷಕ್ಕೆ ಎರಡು ಬಾರಿ ಹೆಚ್ಚಿಸಲಾಗುತ್ತದೆ. ಒಂದು ಜನವರಿಯಿಂದ ಮತ್ತು ಇನ್ನೊಂದು ಜುಲೈನಿಂದ ಜಾರಿಗೆ ಬರುತ್ತದೆ.
ಕೇಂದ್ರ ಸರ್ಕಾರಿ ನೌಕರರಿಗೆ ಸಂಬಳ ಎಷ್ಟು ಹೆಚ್ಚಾಗುತ್ತದೆ?
4% ಡಿಎ ಹೆಚ್ಚಳವನ್ನು ಸರ್ಕಾರ ಘೋಷಿಸಿರುವುದರಿಂದ ಕೇಂದ್ರ ಸರ್ಕಾರಿ ನೌಕರರಿಗೆ ಎಷ್ಟು ವೇತನ ಹೆಚ್ಚಳ ಸಾಧ್ಯತೆಯಿದೆ ಎಂದು ನೋಡುವುದಾದರೆ, ಒಬ್ಬ ನೌಕರರ ವೇತನವು ತಿಂಗಳಿಗೆ 50,000 ರೂ ಆಗಿದ್ದರೆ ಮತ್ತು ಮೂಲ ವೇತನ 15,000 ರೂಪಾಯಿಯಿದ್ದರೆ, ಅವರು 6,900 ರೂಪಾಯಿ ಪಡೆಯುತ್ತಾರೆ. ಇದು ಮೂಲ ವೇತನದ 46% ಆಗಿದೆ.
ಆದರೆ, ಶೇಕಡಾ 4 ರಷ್ಟು ಹೆಚ್ಚಳದ ನಂತರ, ಉದ್ಯೋಗಿಯು ತಿಂಗಳಿಗೆ 7,500 ರೂಪಾಯಿಗಳನ್ನು ಪಡೆಯುತ್ತಾರೆ. ಇದು ಹಿಂದಿನ 6,900 ಕ್ಕೆ ಹೋಲಿಸಿದರೆ 600 ರೂಪಾಯಿ ಹೆಚ್ಚಿದೆ. ಅಕ್ಟೋಬರ್ 2023 ರಲ್ಲಿ ಹಿಂದಿನ ಡಿಎ ಹೆಚ್ಚಳದಲ್ಲಿ, ಸರ್ಕಾರವು ತುಟ್ಟಿಭತ್ಯೆ ಮತ್ತು ಡಿಆರ್ ಅನ್ನು ಶೇಕಡಾ 4 ರಿಂದ 46 ರಷ್ಟು ಹೆಚ್ಚಿಸಿತ್ತು.
ಡಿಎ ಹೆಚ್ಚಳವನ್ನು ಸರ್ಕಾರ ಹೇಗೆ ಲೆಕ್ಕಾಚಾರ ಮಾಡುತ್ತದೆ?
ಅಖಿಲ ಭಾರತ ಸಿಪಿಐ-ಐಡಬ್ಲೂನ 12 ತಿಂಗಳ ಸರಾಸರಿಯಲ್ಲಿನ ಶೇಕಡಾವಾರು ಹೆಚ್ಚಳದ ಆಧಾರದ ಮೇಲೆ ಡಿಎ ಮತ್ತು ಡಿಆರ್ ಹೆಚ್ಚಳವನ್ನು ನಿರ್ಧರಿಸಲಾಗುತ್ತದೆ. ಕೇಂದ್ರ ಸರ್ಕಾರವು ಪ್ರತಿ ವರ್ಷ ಜನವರಿ 1 ಮತ್ತು ಜುಲೈ 1 ರಂದು ಭತ್ಯೆಗಳನ್ನು ಪರಿಷ್ಕರಿಸಿದರೂ, ನಿರ್ಧಾರವನ್ನು ಸಾಮಾನ್ಯವಾಗಿ ಮಾರ್ಚ್ ಮತ್ತು ಸೆಪ್ಟೆಂಬರ್/ಅಕ್ಟೋಬರ್‌ನಲ್ಲಿ ಪ್ರಕಟಿಸಲಾಗುತ್ತದೆ.