ನವದೆಹಲಿ:ಈಗಾಗಲೇ ದೇಶದ ಹಲವೆಡೆ ಬಿಸಿಲಿನ ತಾಪಮಾನ ಹೆಚ್ಚಿದ್ದು, ಬಿಸಿಲ ಗರಿಷ್ಠತೆಗೆ ಜನರು ಸಂಪೂರ್ಣ ತತ್ತರಿಸಿದ್ದಾರೆ. ದಿನದಿಂದ ದಿನಕ್ಕೆ ಸೆಕೆ ಜಾಸ್ತಿಯಾಗುತ್ತಿದ್ದು, ಮನೆಯಿಂದ ಹೊರಬರಲು ಜನರು ಚಿಂತಿಸುವಂತಾಗಿದೆ. ಫ್ಯಾನ್, ಕೂಲರ್, ತಂಪು ಪಾನಿಯಗಳಿಲ್ಲದೆ ಜೀವಿಸುವುದು ಕಷ್ಟಕರ ಎಂಬಂತೆ ಜನಸಾಮಾನ್ಯರು ಹೈರಾಣಾಗಿದ್ದಾರೆ.
ಮಳೆಗಾಲ ಯಾವಾಗ ಶುರುವಾಗುತ್ತದೆಯೋ ಎಂದು ಕಾದು ಕುಳಿತಿರುವ ಜನರಿಗೆ ಇದೀಗ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಭಾರತೀಯ ಹವಾಮಾನ ಇಲಾಖೆ (IMD) ಹೊರಡಿಸಿದ ಪ್ರಕಟಣೆ ಪ್ರಕಾರ, ಮುಂದಿನ ಐದು ದಿನಗಳಲ್ಲಿ ಮಹಾರಾಷ್ಟ್ರ, ಒಡಿಶಾ, ತಮಿಳುನಾಡು, ಆಂಧ್ರಪ್ರದೇಶ, ಪಶ್ಚಿಮ ಬಂಗಾಳ, ಜಾರ್ಖಂಡ್, ಬಿಹಾರ, ತೆಲಂಗಾಣದ ಭಾಗಗಳಲ್ಲಿ ಗರಿಷ್ಠ ತಾಪಮಾನ ಕನಿಷ್ಠ 3ರಿಂದ 4 ಡಿಗ್ರಿಗಳಷ್ಟು ಹೆಚ್ಚಳವಾಗಲಿದೆ ಎಂದು ಮುನ್ಸೂಚನೆ ನೀಡಿದೆ.
ತೀವ್ರ ತಾಪಮಾನ ಹೆಚ್ಚಳದ ಹಿನ್ನೆಲೆ ಭಾರತೀಯ ಹವಾಮಾನ ಕಚೇರಿಯು ಏಪ್ರಿಲ್ 27ರಿಂದ 29ರವರೆಗೆ ರಾಜ್ಯದ ಥಾಣೆ, ರಾಯಗಡ್ ಜಿಲ್ಲೆಗಳು ಮತ್ತು ಮುಂಬೈನ ಕೆಲವು ಭಾಗಗಳಲ್ಲಿ ಬಿಸಿಲಿನ ತಾಪಮಾನದ ಅಲರ್ಟ್ ಅನ್ನು ನೀಡಿದ್ದು, ಮುಂಬೈ ಮತ್ತು ನೆರೆಯ ಪ್ರದೇಶಗಳಿಗೆ ಈ ತಿಂಗಳು ನೀಡಲಾದ ಎರಡನೇ ಹೀಟ್‌ವೇವ್ ಎಚ್ಚರಿಕೆ ಇದಾಗಿದೆ ಎಂದು ವರದಿ ಉಲ್ಲೇಖಿಸಿದೆ.
ಮುಂದಿನ ಐದು ದಿನಗಳ ಕಾಲ ಪಶ್ಚಿಮ ಬಂಗಾಳ ಮತ್ತು ಒಡಿಶಾದ ಕೆಲವು ಭಾಗಗಳಲ್ಲಿ ಬಿಸಿಗಾಳಿಯಿಂದ ತೀವ್ರತರವಾದ ಶಾಖದ ಅಲೆಗಳು ಮುಂದುವರಿಯಲಿದ್ದು, ಸೋಮವಾರ (ಏ.22) ಒಡಿಶಾ ರಾಜ್ಯದ ರಾಜಧಾನಿ ಭುವನೇಶ್ವರದಲ್ಲಿ ಗರಿಷ್ಠ ತಾಪಮಾನ 43.8 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಒಡಿಶಾದಲ್ಲಿ ಗರಿಷ್ಠ ತಾಪಮಾನವು ಏಪ್ರಿಲ್ 28ರವರೆಗೆ 40 ಡಿಗ್ರಿ ಸೆಲ್ಸಿಯಸ್ ಮೀರಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ಹಂಚಿಕೊಂಡಿದೆ.