ಇಂದೋರ್: ಭೋಜಶಾಲಾ ಸಂಕೀರ್ಣದಲ್ಲಿ ವೈಜ್ಞಾನಿಕ ಸಮೀಕ್ಷೆ ನಡೆಸುತ್ತಿರುವ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ(ಎಎಸ್‌ಐ), ಸಮೀಕ್ಷೆ ಪೂರ್ಣಗೊಳಿಸಲು ಮತ್ತೆ ಎಂಟು ವಾರಗಳ ಕಾಲಾವಕಾಶ ಕೋರಿದೆ.
ಸೋಮವಾರ ಹೈಕೋರ್ಟ್‌ನ ಇಂದೋರ್ ಪೀಠದ ಮುಂದೆ ಅರ್ಜಿ ಸಲ್ಲಿಸಿದ ಎಎಸ್‌ಐ, ವಿವಾದಿತ ಸಂಕೀರ್ಣದಲ್ಲಿನ ರಚನೆಗಳ ಸ್ವರೂಪವನ್ನು ಅರ್ಥಮಾಡಿಕೊಳ್ಳಲು ಇನ್ನೂ ಸ್ವಲ್ಪ ಸಮಯ ಬೇಕಾಗುತ್ತದೆ ಎಂದು ತಿಳಿಸಿದೆ.
ಭೋಜಶಾಲಾ ಸಂಕೀರ್ಣವು ಮಧ್ಯಯುಗದ ಒಂದು ಸ್ಮಾರಕ. ಇಲ್ಲಿರುವುದು ವಾಗ್ದೇವಿ (ಸರಸ್ವತಿ) ದೇವಸ್ಥಾನ ಎಂದು ಹಿಂದೂಗಳು ಭಾವಿಸಿದ್ದಾರೆ. ಮುಸ್ಲಿಂ ಸಮುದಾಯವು ಇದು ಕಮಲ ಮೌಲಾ ಮಸೀದಿ ಎಂದು ನಂಬಿದೆ.
2003ರ ಏಪ್ರಿಲ್ 7ರಂದು ಎಎಸ್‌ಐ ಹೊರಡಿಸಿದ ಆದೇಶದ ಅನ್ವಯ ಭೋಜಶಾಲಾ ಸಂಕೀರ್ಣದಲ್ಲಿ ಪ್ರತಿ ಮಂಗಳವಾರ ಪೂಜೆ ಸಲ್ಲಿಸಲು ಹಿಂದೂಗಳಿಗೆ ಅವಕಾಶ ಇದೆ. ಮುಸ್ಲಿಮರಿಗೆ ಪ್ರತಿ ಶುಕ್ರವಾರ ನಮಾಜ್ ಮಾಡಲು ಅವಕಾಶ ಇದೆ.