ಭೋಪಾಲ್: ಖಜುರಾಹೊ ಲೋಕಸಭಾ ಕ್ಷೇತ್ರದ ಕೆಲವು ಅಭ್ಯರ್ಥಿಗಳನ್ನು ಕಣದಿಂದ ಹಿಂದೆ ಸರಿಯುವಂತೆ ಬಿಜೆಪಿಯು ಒತ್ತಾಯಿಸುತ್ತಿದೆ ಎಂದು ಮಧ್ಯಪ್ರದೇಶ ಕಾಂಗ್ರೆಸ್ ಮುಖ್ಯಸ್ಥ ಜಿತು ಪಟ್ವಾರಿ ಭಾನುವಾರ ಆರೋಪಿಸಿದ್ದಾರೆ.
ಭೋಪಾಲ್: ಖಜುರಾಹೊ ಲೋಕಸಭಾ ಕ್ಷೇತ್ರದ ಕೆಲವು ಅಭ್ಯರ್ಥಿಗಳನ್ನು ಕಣದಿಂದ ಹಿಂದೆ ಸರಿಯುವಂತೆ ಬಿಜೆಪಿಯು ಒತ್ತಾಯಿಸುತ್ತಿದೆ ಎಂದು ಮಧ್ಯಪ್ರದೇಶ ಕಾಂಗ್ರೆಸ್ ಮುಖ್ಯಸ್ಥ ಜಿತು ಪಟ್ವಾರಿ ಭಾನುವಾರ ಆರೋಪಿಸಿದ್ದಾರೆ.
'ಕಣದಿಂದ ಹಿಂದೆ ಸರಿಯುವಂತೆ ಬಿಜೆಪಿಯು ಹಲವು ತಂತ್ರ ಪ್ರಯೋಗಿಸುತ್ತಿದೆ ಎಂದು ಆಲ್ ಇಂಡಿಯಾ ಫಾರ್ವರ್ಡ್ ಬ್ಲಾಕ್ ಅಭ್ಯರ್ಥಿ ಆರ್.ಬಿ.ಪ್ರಜಾಪತಿ ಅವರು ನನ್ನಲ್ಲಿ ತಿಳಿಸಿದ್ದಾರೆ' ಎಂದು ಪಟ್ವಾರಿ ಹೇಳಿದರು.
ಪ್ರಜಾಪತಿ ಅವರು ಈ ಸಂಬಂಧ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿರುವುದಾಗಿಯೂ ಅವರು ತಿಳಿಸಿದರು. ಸಾಮಾನ್ಯವಾಗಿ ಪಂಚಾಯಿತಿ ಚುನಾವಣೆಗಳಲ್ಲಿ ಬಳಸುವಂಥ ತಂತ್ರಗಳನ್ನು ಬಿಜೆಪಿಯು ಅತಿ ದೊಡ್ಡ ಚುನಾವಣೆಯಲ್ಲಿ ಬಳಸುತ್ತಿದೆ ಎಂದು ಅವರು ಆರೋಪಿಸಿದರು.
'ಚುನಾವಣಾಧಿಕಾರಿಯು ಬಿಜೆಪಿ ಕಾರ್ಯಕರ್ತನಂತೆ ವರ್ತಿಸುತ್ತಿದ್ದು, ಎಸ್‌ಪಿ ಅಭ್ಯರ್ಥಿಯ ನಾಮಪತ್ರವನ್ನು ತಿರಸ್ಕರಿಸಿದ್ದಾರೆ. ಅದನ್ನು ಕಾನೂನು ಹೋರಾಟದ ಮೂಲಕ ಎದುರಿಸುತ್ತೇವೆ. ಈಗ ಉಳಿದ ಅಭ್ಯರ್ಥಿಗಳ ಪೈಕಿ ಕೆಲವರನ್ನು ಅಪಹರಿಸಲಾಗಿದೆ. ಕೆಲವರು ಭೂಗತರಾಗಿದ್ದಾರೆ. ಸಾರ್ವಜನಿಕವಾಗಿ ಯಾರೂ ಕಾಣಿಸಿಕೊಳ್ಳುತ್ತಿಲ್ಲ. ಎಲ್ಲರ ಮೇಲೆ ಒತ್ತಡ ಹೇರಲಾಗುತ್ತಿದೆ' ಎಂದು ಪಟ್ವಾರಿ ದೂರಿದರು.
ಪಟ್ವಾರಿ ಆರೋಪದ ಬಗ್ಗೆ ಬಿಜೆಪಿ ಕಾರ್ಯದರ್ಶಿ ರಜನೀಶ್ ಅಗರ್ವಾಲ್ ಪ್ರತಿಕ್ರಿಯಿಸಿದ್ದು, 'ಎಸ್‌ಪಿ ಅಭ್ಯರ್ಥಿಯ ನಾಮಪತ್ರ ತಿರಸ್ಕೃತಗೊಂಡಿರುವುದರಿಂದ 'ಇಂಡಿಯಾ' ಕೂಟದೊಳಗಿನ ಆಂತರಿಕ ಕಚ್ಚಾಟ ಬಯಲಿಗೆ ಬಂದಿದೆ. ಅದನ್ನು ಮುಚ್ಚಿಟ್ಟುಕೊಳ್ಳಲು ಅವರು ಬಿಜೆಪಿ ವಿರುದ್ಧ ಆಧಾರರಹಿತ ಆರೋಪ ಮಾಡುತ್ತಿದ್ದಾರೆ' ಎಂದರು.