ನವದೆಹಲಿ: ಲೋಕಸಭಾ ಚುನಾವಣೆಗೆ ಬಿಜೆಪಿಯು ಸಿದ್ಧಪಡಿಸಿರುವ ಪ್ರಣಾಳಿಕೆ 'ಸಂಕಲ್ಪ ಪತ್ರ'ವನ್ನು ಭಾನುವಾರ ಬಿಡುಗಡೆ ಮಾಡಲಾಯಿತು.
ಇಲ್ಲಿನ ಪಕ್ಷದ ಕಚೇರಿಯಲ್ಲಿ ಪ್ರಣಾಳಿಕೆ ಬಿಡುಗಡೆ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ಹಾಗೂ ಪ್ರಣಾಳಿಕೆ ಸಮಿತಿ ಅಧ್ಯಕ್ಷ ರಾಜನಾಥ್ ಸಿಂಗ್ ಮತ್ತು ಇತರ ಹಿರಿಯ ನಾಯಕರು ಭಾಗವಹಿಸಿದ್ದರು.
ಬಾಬಾಸಾಹೇಬ್ ಅಂಬೇಡ್ಕರ್ ಅವರು ರೂಪಿಸಿದ ಸಾಮಾಜಿಕ ನ್ಯಾಯದ ಆದರ್ಶಗಳನ್ನು ಬಿಜೆಪಿ ಅನುಸರಿಸುತ್ತಿದೆ. ಅವರ ಜನ್ಮದಿನದಂದೇ ಪ್ರಣಾಳಿಕೆಯನ್ನು ಬಿಡುಗಡೆ ಮಾಡಲಾಗುತ್ತಿದೆ ಎಂದು ನಡ್ಡಾ ಹೇಳಿದರು.
ಗ್ರಾಮೀಣ ರಸ್ತೆಗಳು, ಶೌಚಾಲಯಗಳ ನಿರ್ಮಾಣ, 25 ಕೋಟಿ ಜನರನ್ನು ಬಡತನದಿಂದ ಮುಕ್ತಗೊಳಿಸುವುದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಕೆಲವು ಸಾಧನೆಗಳಾಗಿವೆ ಎಂದು ಅವರು ಹೇಳಿದರು.
ಯುವಕರು, ಮಹಿಳೆಯರು, ರೈತರು ಮತ್ತು ಬಡವರಿಗಾಗಿ ವಿವಿಧ ಯೋಜನೆಗಳನ್ನು ಜಾರಿಗೊಳಿಸುವ ಭರವಸೆಯೂ ಪ್ರಣಾಳಿಕೆಯಲ್ಲಿ ಸ್ಥಾನ ಪಡೆದಿವೆ. ಬಿಜೆಪಿಯು ಪ್ರಣಾಳಿಕೆ ಸಿದ್ಧಪಡಿಸಲು ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದ ಸಮಿತಿಯನ್ನು ನೇಮಕ ಮಾಡಿತ್ತು.