ಕುಂಬಳೆ: ಯೇಸು ಕ್ರಿಸ್ತರ ಪುನರುತ್ಥಾನದ ಸ್ಮರಣೆಯ ಈಸ್ಟರ್ ಹಬ್ಬವನ್ನು ಕ್ರೈಸ್ತ ಬಾಂಧವರು ಭಕ್ತಿ ಹಾಗೂ ಸಂಭ್ರಮದಿಂದ ಆಚರಿಸಿದರು. ಶನಿವಾರ ರಾತ್ರಿ ಚರ್ಚ್‍ಗಳಲ್ಲಿ ಈಸ್ಟರ್ ಜಾಗರಣೆ ನಡೆಸಲಾಯಿತು. ಪ್ರಾರ್ಥನೆ ಹಾಗೂ ಬಲಿಪೂಜೆ ನಡೆಯಿತು.
ಕಯ್ಯಾರ್ ಕ್ರಿಸ್ತರಾಜ ದೇವಾಲಯದಲ್ಲಿ ನಡೆದ ವಿಧಿವಿಧಾನ ಹಾಗೂ ಬಲಿಪೂಜೆಯನ್ನು ಜೆಪ್ಪು ಸೆಮಿನರಿಯ ನಿವೃತ್ತ ಪ್ರಾಧ್ಯಾಪಕ ವಂದನೀಯ ಫಾ.ವಿಲ್ಲಿಯಂ ಬರ್ಬೋಜಾ ನೆರವೇರಿಸಿದರು. ಕ್ರಿಸ್ತರಾಜ ದೇವಾಲಯದ ಧರ್ಮಗುರು ವಂ.ಫಾ. ವಿಶಾಲ್ ಮೊನಿಸ್ ನೇತೃತ್ವ ನೀಡಿದರು. ಹೊಸ ಅಗ್ನಿಯ ಆಶೀರ್ವಚನದೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಹೊಸ ಅಗ್ನಿಯಿಂದ ಈಸ್ಟರ್ ಮೊಂಬತ್ತಿಯನ್ನು ಧರ್ಮಗುರುಗಳು ಬೆಳಗಿಸಿದ ಬಳಿಕ ಭಾಗವಹಿಸಿದ ಸಮಸ್ತ ಕ್ರೈಸ್ತರು ಈ ಅಗ್ನಿಯ ಮೂಲಕ ಮೇಣದ ಬತ್ತಿಗಳನ್ನು ಉರಿಸಿ ಪ್ರಾರ್ಥನೆ ಸಲ್ಲಿಸಿದರು. ಬೈಬಲಿನ ಹಳೆಯ ಹಾಗೂ ಹೊಸ ಒಡಂಬಡಿಕೆಯ ಆಯ್ದ ಭಾಗಗಳ ವಾಚನದ ಬಳಿಕ ಧರ್ಮಗುರುಗಳು ಪ್ರವಚನ ಹಾಗೂ ಸಂದೇಶ ನೀಡಿದರು. ಕ್ರೈಸ್ತ ಸಂತರನ್ನು ಸ್ಮರಿಸಿ ಶುಭಾಶೀರ್ವಾದ ಕೋರಲಾಯಿತು.