ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಮ್ಮ ಕುಟುಂಬದ ರಾಜಕೀಯ ಪರಂಪರೆ ಅವಲಂಬಿಸಿದ್ದಾರೆ ಎಂದು ಡೆಮಾಕ್ರಟಿಕ್ ಪ್ರೋಗ್ರೆಸಿವ್ ಆಜಾದ್ ಪಕ್ಷದ (ಡಿಪಿಎಪಿ) ಮುಖಂಡ ಗುಲಾಂ ನಬಿ ಆಜಾದ್ ಟೀಕಿಸಿದ್ದಾರೆ.
ಪಕ್ಷದ ಚುನಾವಣೆ ಪ್ರಚಾರ ಸಮಾವೇಶದಲ್ಲಿ ಮಾತನಾಡಿದ ಅವರು ರಾಹುಲ್ ಗಾಂಧಿ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಸುರಕ್ಷಿತ ಸ್ಥಳಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಅದರಲ್ಲೂ ಅಲ್ಪಸಂಖ್ಯಾತರು ಪ್ರಾಬಲ್ಯವಿರುವ ಸ್ಥಳಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಬಿಜೆಪಿ ಆಡಳಿತ ಇರುವ ರಾಜ್ಯಗಳಲ್ಲಿ ಅವರು ಯಾಕೆ ಸ್ಪರ್ಧೆ ಮಾಡುವುದಿಲ್ಲ ಎಂದು ಪ್ರಶ್ನಿಸಿದ್ದಾರೆ. ಬಿಜೆಪಿ ವಿರುದ್ಧ ಕೆಚ್ಚೆದೆಯ ಹೋರಾಟ ಮಾಡುತ್ತೇನೆ ಎಂದು ಹೇಳಿಕೊಳ್ಳುವ ರಾಹುಲ್, ಬಿಜೆಪಿ ಆಡಳಿತವಿರುವ ರಾಜ್ಯಗಳನ್ನು ಹೊರತುಪಡಿಸಿ ಅಲ್ಪಸಂಖ್ಯಾತ ಪ್ರಾಬಲ್ಯದ ರಾಜ್ಯಗಳಲ್ಲಿ ಏಕೆ ಆಶ್ರಯ ಪಡೆಯಬೇಕು ಎಂದು ಪ್ರಶ್ನೆ ಮಾಡಿದರು. ಕಾಶ್ಮೀರದಲ್ಲಿ ಒಮರ್ ಅಬ್ದುಲ್ಲಾ ಹಾಗೂ ರಾಹುಲ್ ಗಾಂಧಿ ತಮ್ಮ ರಾಜಕೀಯ ಪರಂಪರೆಯನ್ನು ಅವಲಂಭಿಸಿದ್ದಾರೆ ಎಂದು ಕಟುವಾಗಿ ಟೀಕಿಸಿದ್ದಾರೆ.
ಫಾರುಕ್ ಅಬ್ದುಲ್ಲಾ ಅವರು ಡಿಪಿಎಪಿ ವಿರುದ್ಧ ಚೆನಾಬ್ ಕಣಿವೆಯಲ್ಲಿ ಪ್ರಚಾರ ಮಾಡುತ್ತಿದ್ದಾರೆ, ಬಿಜೆಪಿ ವಿರುದ್ಧ ಅಲ್ಲ. ಜಾತ್ಯತೀತ ಮತಗಳನ್ನು ವಿಭಜಿಸುವ ಕಾರ್ಯವನ್ನು ಅವರಿಗೆ ವಹಿಸಲಾಗಿದೆ. ಅವರು ತಮ್ಮ ಕ್ಷೇತ್ರಕ್ಕೆ ಏನನ್ನೂ ಮಾಡಿಲ್ಲ ಎಂದು ಆಜಾದ್ ಆರೋಪಿಸಿದ್ದಾರೆ.