ನವದೆಹಲಿ: ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಉಜ್ಬೇಕಿಸ್ತಾನ ಮೂಲದ ರೋಗಿಯೊಬ್ಬರಿಗೆ ಒಮ್ಮೆಲೆ ಯಕೃತ್ತು ಮತ್ತು ಮೂತ್ರಪಿಂಡ ಕಸಿ ಮಾಡುವ ಅಪರೂಪದ ಶಸ್ತ್ರಚಿಕಿತ್ಸೆ ನೆರವೇರಿಸುವ ಮೂಲಕ ಇಲ್ಲಿನ ವೈದ್ಯರು ಗಮನ ಸೆಳೆದಿದ್ದಾರೆ.
ನವದೆಹಲಿ: ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಉಜ್ಬೇಕಿಸ್ತಾನ ಮೂಲದ ರೋಗಿಯೊಬ್ಬರಿಗೆ ಒಮ್ಮೆಲೆ ಯಕೃತ್ತು ಮತ್ತು ಮೂತ್ರಪಿಂಡ ಕಸಿ ಮಾಡುವ ಅಪರೂಪದ ಶಸ್ತ್ರಚಿಕಿತ್ಸೆ ನೆರವೇರಿಸುವ ಮೂಲಕ ಇಲ್ಲಿನ ವೈದ್ಯರು ಗಮನ ಸೆಳೆದಿದ್ದಾರೆ.
ಇಲ್ಲಿನ ವೈಶಾಲಿಯಲ್ಲಿರುವ ಮ್ಯಾಕ್ಸ್ ಆಸ್ಪತ್ರೆಯಲ್ಲಿ ಕಳೆದ ತಿಂಗಳು ಈ ಶಸ್ತ್ರಚಿಕಿತ್ಸೆ ನೆರವೇರಿಸಲಾಗಿದೆ.
'ಈ ರೀತಿಯ ಎರಡು ಅಂಗಾಂಗಗಳ ಕಸಿ ಶಸ್ತ್ರಚಿಕಿತ್ಸೆ ಅಪರೂಪ ಮಾತ್ರವಲ್ಲ, ಸವಾಲಿನ ಕಾರ್ಯವೂ ಆಗಿದೆ. ಆಧುನಿಕ ವೈದ್ಯಕೀಯ ಪದ್ಧತಿಯ ಮಹತ್ವವನ್ನು ಈ ಶಸ್ತ್ರಚಿಕಿತ್ಸೆ ತೋರಿಸಿಕೊಟ್ಟಂತಾಗಿದೆ' ಎಂದು ಆಸ್ಪತ್ರೆಯ ಮೂತ್ರಪಿಂಡ ವಿಜ್ಞಾನ ವಿಭಾಗದ ಪ್ರಧಾನ ನಿರ್ದೇಶಕಿ ಡಾ.ನೀರೂ ಅಗರವಾಲ್ ಹೇಳಿದ್ದಾರೆ.
'46 ವರ್ಷದ ಅಖ್ರೋರ್ಜನ್ ಖಯ್‌ದರೋವ್ ಎಂಬುವವರು ಯಕೃತ್ತಿನ ಸಮಸ್ಯೆಯಿಂದ ಬಳಲುತ್ತಿದ್ದರು. ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ, ಎರಡೂ ಮೂತ್ರಪಿಂಡಗಳ ಕಾರ್ಯಕ್ಷಮತೆ ಶೇ 20ಕ್ಕಿಂತಲೂ ಕಡಿಮೆ ಇದ್ದದ್ದು ಕಂಡುಬಂತು' ಎಂದು ಡಾ.ಅಗರವಾಲ್ ಹೇಳಿದ್ದಾರೆ.
'ಪಿತ್ತ ಜನಕಾಂಗದ ಜೊತೆಗೆ ಮೂತ್ರಪಿಂಡ ಕಸಿ ನೆರವೇರಿಸುವ ಅಗತ್ಯದ ಕುರಿತು ಅವರಿಗೆ ತಿಳಿಸಲಾಯಿತು. ಅವರ ಮಗಳು ಯಕೃತ್ತಿನ ಒಂದು ಭಾಗ ದಾನ ಮಾಡಿದರೆ, ಪತ್ನಿ ಮೂತ್ರಪಿಂಡ ದಾನ ಮಾಡಿದರು. ಸತತ 16 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನೆರವೇರಿಸಲಾಯಿತು' ಎಂದು ಹೇಳಿದ್ದಾರೆ.