ನವದೆಹಲಿ: ಏಪ್ರಿಲ್ 8 ರಂದು ಉತ್ತರ ಅಮೆರಿಕದಲ್ಲಿ ಸಂಭವಿಸಿದ ಸೂರ್ಯಗ್ರಹಣವು ಲಕ್ಷಾಂತರ ಜನರನ್ನು ಆಕರ್ಷಿಸಿತು. ಈ ಗ್ರಹಣದ ಸಮಯದಲ್ಲೇ ಅನೇಕ ಕಾರ್ಯಕ್ರಮಗಳು, ಹಬ್ಬಗಳು ಮತ್ತು ಸಾಮೂಹಿಕ ವಿವಾಹಗಳು ಸಹ ನಡೆದವು. ಇದಲ್ಲದೆ, ಸೂರ್ಯಗ್ರಹಣದ ಸಮಯದಲ್ಲಿ ಅನೇಕ ಪ್ರಾಣಿಗಳು ಶಾಂತವಾಗಿದ್ದರೆ, ಕೆಲವು ಪ್ರಾಣಿಗಳಂತೂ ತುಂಬಾ ವಿಚಿತ್ರವಾಗಿ ವರ್ತಿಸಿರುವುದು ಕಂಡಿಬಂದಿದೆ.
ಟೆಕ್ಸಾಸ್‌ನ ಫೋರ್ಟ್ ವರ್ತ್ ಮೃಗಾಲಯ ಸೇರಿದಂತೆ ಅನೇಕ ಮೃಗಾಲಯಗಳಲ್ಲಿ ಗ್ರಹಣದ ಸಮಯದಲ್ಲಿ ವಿಜ್ಞಾನಿಗಳು ಪ್ರಾಣಿಗಳನ್ನು ಚಲನಾವಲವನ್ನು ವೀಕ್ಷಿಸಿದರು. ಆದಾಗ್ಯೂ, ಮೃಗಾಲಯಗಳಲ್ಲಿ ಹೆಚ್ಚಿನ ಪ್ರಾಣಿಗಳು ಶಾಂತವಾಗಿದ್ದವು. ಆದರೆ ಗೊರಿಲ್ಲಾ, ಸಿಂಹ ಮತ್ತು ಲೆಮರ್ಸ್ ಸೇರಿದಂತೆ ಕೆಲವು ಪ್ರಾಣಿಗಳು ಸಾಮಾನ್ಯಕ್ಕಿಂತ ತುಂಬಾ ವಿಚಿತ್ರವಾಗಿ ವರ್ತಿಸಿರುವುದು ಕಂಡುಬಂದಿದೆ. ಆದರೆ, ಪ್ರಾಣಿಗಳಲ್ಲಿ ಹೆಚ್ಚಿದ ಆತಂಕವಾಗಲಿ ಅಥವಾ ಮಾನಸಿಕ ಒತ್ತಡದಂತಹ ಯಾವುದೇ ಲಕ್ಷಣಗಳು ಕಂಡುಬಂದಿಲ್ಲ ಮತ್ತು ಗ್ರಹಣ ಮುಗಿಯುವ ವೇಳೆಗೆ ಎಲ್ಲವೂ ಸಹಜ ಸ್ಥಿತಿಗೆ ಮರಳಿದೆ ಎಂದು ಮೃಗಾಲಯದ ವಕ್ತಾರರು ತಿಳಿಸಿದ್ದಾರೆ.
ಗ್ರಹಣದ ಸಮಯದಲ್ಲಿ ತೀವ್ರ ಕತ್ತಲೆಯಿಂದಾಗಿ ಕೆಲವು ಪ್ರಾಣಿಗಳು ರಾತ್ರಿಯ ಸಮಯದಲ್ಲಿ ಗುಹೆ ಸೇರಿದಂತೆ ಕಂಡುಬರುತ್ತವೆ. ಗೊರಿಲ್ಲಾ, ಜಿರಾಫೆ, ಆನೆ, ಕೋಟಿಸ್, ಬೊನೊಬೊಸ್ ಮತ್ತು ಅಲ್ಡಾಬ್ರಾ ಆಮೆಗಳು ವಿಚಿತ್ರವಾಗಿ ವರ್ತಿಸಿದವು. ಟೆಕ್ಸಾಸ್ ಮೃಗಾಲಯದಲ್ಲಿ ರಿಂಗ್‌ಟೈಲ್ ಬೆಕ್ಕು ಮತ್ತು ಎರಡು ಜಾತಿಯ ಗೂಬೆಗಳನ್ನು ಹಗಲಿನಲ್ಲಿಯೂ ಗುರುತಿಸಲಾಗಿದೆ. ಸಾಮಾನ್ಯವಾಗಿ ಇವು ಹಗಲಿನಲ್ಲಿ ಇರುವುದಿಲ್ಲ. ಇನ್ನೂ ಡಲ್ಲಾಸ್ ಮೃಗಾಲಯದಲ್ಲಿ ಗ್ರಹಣದ ಸಮಯದಲ್ಲಿ ಜಿರಾಫೆ ಮತ್ತು ಜೀಬ್ರಾಗಳು ಅತ್ತಿಂದಿತ್ತ ಸುಮ್ಮನೆ ಓಡಾಡುವುದನ್ನು ಗುರುತಿಸಿದರು.
ಕೆಲ ಚಿಂಪಾಂಜಿಗಳು ಮೃಗಾಲಯದಲ್ಲಿ ತಿರುಗಾಡುವಾಗ ವಿಚಿತ್ರವಾಗಿ ವರ್ತಿಸಿವೆ. ಸೂರ್ಯಗ್ರಹಣದ ಸಮಯದಲ್ಲಿ, ಆಸ್ಟ್ರಿಚ್ ಪಕ್ಷಿ ಡಲ್ಲಾಸ್ ಮೃಗಾಲಯದಲ್ಲಿ ಮೊಟ್ಟೆಯಿಟ್ಟಿತು. ಇತರ ಪಕ್ಷಿಗಳು ಮೌನಕ್ಕೆ ಜಾರಿದ್ದವು. ಪೆಂಗ್ವಿನ್‌ಗಳು ಮತ್ತು ಫ್ಲೆಮಿಂಗೋಗಳು ಪರಸ್ಪರ ಬಿಗಿಯಾಗಿ ತಬ್ಬಿಕೊಳ್ಳುತ್ತಿದ್ದವು. ಇಂಡಿಯಾನಾಪೊಲಿಸ್ ಮೃಗಾಲಯದಲ್ಲಿರುವ ಪಕ್ಷಿಗಳು ಕೂಡ ವಿಚಿತ್ರವಾಗಿ ವರ್ತಿಸಿವೆ ಎಂದು ಮೃಗಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ರಾತ್ರಿಯಲ್ಲಿ ಆಗಾಗ ಸದ್ದು ಮಾಡುವ ಗಿಳಿಗಳು ಮತ್ತು ಬುಡಗೇರಿಗಳು ಸೇರಿ ಕೆಲ ಪಕ್ಷಿಗಳು ಗ್ರಹಣದ ರಾತ್ರಿ ತುಂಬಾ ಮೌನವಾಗಿದ್ದವು.
2017ರಲ್ಲೂ ಇದೇ ವರ್ತನೆ
ಗಮನಾರ್ಹ ಸಂಗತಿ ಏನೆಂದರೆ 2017 ರಲ್ಲಿಯೂ ಸೂರ್ಯಗ್ರಹಣದ ಸಮಯದಲ್ಲಿ ಪ್ರಾಣಿಗಳಲ್ಲಿ ಇದೇ ರೀತಿಯ ನಡವಳಿಕೆ ಕಂಡುಬಂದಿದೆ. 2020ರ ಅಧ್ಯಯನದ ಪ್ರಕಾರ ದಕ್ಷಿಣ ಕೆರೊಲಿನಾದ ಮೃಗಾಲಯದಲ್ಲಿ ಸಸ್ತನಿಗಳು, ಪಕ್ಷಿಗಳು ಮತ್ತು ಸರೀಸೃಪಗಳು ಸೇರಿದಂತೆ 17 ಜಾತಿಗಳನ್ನು ಒಳಗೊಂಡಿತ್ತು. ಸುಮಾರು 75 ಪ್ರತಿಶತ ಜಾತಿಗಳು ಗ್ರಹಣದ ಸಮಯದಲ್ಲಿ ಕೆಲವು ರೀತಿಯ ವಿಚಿತ್ರ ವರ್ತನೆಗಳನ್ನು ಪ್ರದರ್ಶಿಸಿವೆ ಎಂದು ವರದಿ ಮಾಡಿದೆ. ಕೆಲವು ಪ್ರಾಣಿಗಳು ಭಯಭೀತರಾಗಿ ಕಾಣಿಸಿಕೊಂಡರೆ, ಹೆಚ್ಚಿನವು ಸಂಜೆ ಅಥವಾ ರಾತ್ರಿಯಲ್ಲಿ ಸಾಮಾನ್ಯವಾಗಿ ವರ್ತಿಸಿವೆ.