ನವದೆಹಲಿ: ಗ್ಯಾನವಾಪಿ ಮಸೀದಿಯಲ್ಲಿಯ 'ವ್ಯಾಸ ತೆಹಖಾನಾ'ದಲ್ಲಿ ಪೂಜೆ ಸಲ್ಲಿಸಲು ಹಿಂದೂ ಧರ್ಮೀಯರಿಗೆ ಅವಕಾಶ ನೀಡಿ ಕೆಳಹಂತದ ನ್ಯಾಯಾಲಯವೊಂದು ನೀಡಿರುವ ತೀರ್ಪನ್ನು ಅಲಹಾಬಾದ್ ಹೈಕೋರ್ಟ್ ಎತ್ತಿಹಿಡಿದಿರುವುದನ್ನು ಪ್ರಶ್ನಿಸಿ ಮಸೀದಿ ನಿರ್ವಹಣಾ ಸಮಿತಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಇಂದು(ಸೋಮವಾರ) ನಡೆಸಲಿದೆ.
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದೀವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನು ಒಳಗೊಂಡ ನ್ಯಾಯಪೀಠವು ಅಂಜುಮಾನ್ ಇಂತೆಝಾಮಿಯಾ ಮಸ್ಜಿದ್ ಸಮಿತಿಯ ಅರ್ಜಿಯ ವಿಚಾರಣೆ ನಡೆಸಲಿದೆ.
ಕೆಳಹಂತದ ನ್ಯಾಯಾಲಯದ ತೀರ್ಪು ಪ್ರಶ್ನಿಸಿ ಮಸೀದಿ ಸಮಿತಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಫೆಬ್ರುವರಿ 26ರಂದು ತಿರಸ್ಕರಿಸಿತ್ತು. ಜೊತೆಗೆ, ವ್ಯಾಸ ತೆಹಖಾನಾದಲ್ಲಿ ಹಿಂದೂಗಳು ಪೂಜೆ ಸಲ್ಲಿಸುವುದನ್ನು 1993ರ ಉತ್ತರ ಪ್ರದೇಶ ಸರ್ಕಾರವು ನಿಷೇಧಿಸಿದ್ದನ್ನು 'ಅಕ್ರಮ' ಎಂದೂ ಕರೆದಿತ್ತು.
ಇನ್ನುಮುಂದೆ ಹಿಂದೂ ಅರ್ಚಕರೊಬ್ಬರು ವ್ಯಾಸ ತೆಹಖಾನಾದಲ್ಲಿ ಪೂಜೆ ನೆರವೇರಿಸಬಹುದು ಎಂದೂ ಕೆಳಹಂತದ ನ್ಯಾಯಾಲಯ ಆದೇಶಿಸಿತ್ತು. ಅದರಂತೆ, ಈಗ ಕಾಶಿ ವಿಶ್ವನಾಥ ದೇವಸ್ಥಾನ ಮಂಡಳಿ ನೇಮಿಸಿರುವ ಅರ್ಚಕರೊಬ್ಬರು ಅಲ್ಲಿ ಪೂಜೆ ನೆರವೇರಿಸುತ್ತಿದ್ದಾರೆ.