HEALTH TIPS

ಆರ್‌ಟಿಐ ಅಡಿ ಚುನಾವಣಾ ಬಾಂಡ್ ವಿವರ ನೀಡಲು ಎಸ್‌ಬಿಐ ನಕಾರ

              ವದೆಹಲಿ: ಚುನಾವಣಾ ಬಾಂಡ್‌ಗೆ ಸಂಬಂಧಿಸಿದಂತೆ ಕೇಂದ್ರ ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ವಿವರಗಳನ್ನು ಮಾಹಿತಿ ಹಕ್ಕು ಕಾಯ್ದೆಯ (ಆರ್‌ಟಿಐ) ಅಡಿಯಲ್ಲಿ ನೀಡಲು ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‌ಬಿಐ) ನಿರಾಕರಿಸಿದೆ. ಈ ವಿವರಗಳು ಪರಸ್ಪರ ವಿಶ್ವಾಸಕ್ಕೆ ಸಂಬಂಧಿಸಿದವು ಎಂದು ಅದು ನಿರಾಕರಣೆಗೆ ಕಾರಣ ಹೇಳಿದೆ.

             ಆದರೆ, ಬಾಂಡ್‌ಗಳಿಗೆ ಸಂಬಂಧಿಸಿದ ವಿವರಗಳು ಸುಪ್ರೀಂ ಕೋರ್ಟ್‌ನ ಸೂಚನೆಯ ಪರಿಣಾಮವಾಗಿ ಈಗಾಗಲೇ ಬಹಿರಂಗಗೊಂಡಿವೆ.

                     ಚುನಾವಣಾ ಬಾಂಡ್ ಯೋಜನೆಯು ಅಸಾಂವಿಧಾನಿಕ ಎಂದು ತೀರ್ಪು ನೀಡಿದ್ದ ಸುಪ್ರೀಂ ಕೋರ್ಟ್‌, 2019ರ ಏಪ್ರಿಲ್‌ 12ರಿಂದ ಖರೀದಿಸಲಾದ ಚುನಾವಣಾ ಬಾಂಡ್‌ಗಳ ವಿವರವನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಬೇಕು ಎಂದು ಎಸ್‌ಬಿಐಗೆ ಈಚೆಗೆ ಸೂಚಿಸಿತ್ತು. ಎಸ್‌ಬಿಐ ಸಲ್ಲಿಸಿದ ವಿವರಗಳನ್ನು ಆಯೋಗವು ಮಾರ್ಚ್‌ 13ಕ್ಕೆ ಮೊದಲು ವೆಬ್‌ಸೈಟ್‌ನಲ್ಲಿ ಪ್ರಕಟಿಸಬೇಕು ಎಂದು ತಾಕೀತು ಮಾಡಿತ್ತು.

                 ಆರ್‌ಟಿಐ ಕಾರ್ಯಕರ್ತ ಕಮಡೋರ್ (ನಿವೃತ್ತ) ಲೋಕೇಶ್ ಬಾತ್ರಾ ಅವರು ಚುನಾವಣಾ ಬಾಂಡ್‌ಗಳಿಗೆ ಸಂಬಂಧಿಸಿದ ಸಂಪೂರ್ಣ ವಿವರವನ್ನು, ಚುನಾವಣಾ ಆಯೋಗಕ್ಕೆ ಸಲ್ಲಿಸಿದ ರೀತಿಯಲ್ಲಿ ಡಿಜಿಟಲ್ ರೂಪದಲ್ಲಿ ನೀಡಬೇಕು ಎಂದು ಮಾರ್ಚ್‌ 13ರಂದು ಎಸ್‌ಬಿಐಗೆ ಆರ್‌ಟಿಐ ಅಡಿ ಕೋರಿಕೆ ಸಲ್ಲಿಸಿದ್ದರು.

              ಆದರೆ, ಮಾಹಿತಿ ಬಹಿರಂಗಕ್ಕೆ ವಿನಾಯಿತಿ ನೀಡಿರುವ ಆರ್‌ಟಿಐ ಕಾಯ್ದೆಯ ಸೆಕ್ಷನ್ 8ನ್ನು ಉಲ್ಲೇಖಿಸಿ ಎಸ್‌ಬಿಐ ಮಾಹಿತಿ ನಿರಾಕರಿಸಿದೆ.

                'ನೀವು ಕೋರಿರುವ ಮಾಹಿತಿಯು ಬಾಂಡ್ ಖರೀದಿ ಮಾಡಿದವರು ಹಾಗೂ ರಾಜಕೀಯ ಪಕ್ಷಗಳಿಗೆ ಸಂಬಂಧಿಸಿದೆ. ಇವು ಪರಸ್ಪರ ವಿಶ್ವಾಸವನ್ನು ಆಧರಿಸಿವೆ. ಹೀಗಾಗಿ, ಇವುಗಳ ಮಾಹಿತಿಯನ್ನು ಆರ್‌ಟಿಐ ಅಡಿ ನೀಡುವುದಕ್ಕೆ ಸೆಕ್ಷನ್ 8(1)(ಇ) ಹಾಗೂ (ಜೆ) ಅಡಿಯಲ್ಲಿ ವಿನಾಯಿತಿ ಇದೆ' ಎಂದು ಎಸ್‌ಬಿಐ, ಬಾತ್ರಾ ಅವರಿಗೆ ತಿಳಿಸಿದೆ.

ಚುನಾವಣಾ ಬಾಂಡ್‌ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ವಾದ ಮಂಡಿಸಲು ಹಿರಿಯ ವಕೀಲ                      ಹರೀಶ್ ಸಾಳ್ವೆ ಅವರಿಗೆ ಕೊಟ್ಟ ಶುಲ್ಕ ಎಷ್ಟು ಎಂಬ ಮಾಹಿತಿಯನ್ನೂ ಬಾತ್ರಾ ಅವರು ಆರ್‌ಟಿಐ ಅಡಿ ಕೋರಿದ್ದರು. ಈ ಮಾಹಿತಿಯನ್ನು ಕೂಡ ಎಸ್‌ಬಿಐ ಒದಗಿಸಿಲ್ಲ.

               ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ಈಗಾಗಲೇ ಇರುವ ಮಾಹಿತಿಯನ್ನು ನೀಡಲು ಎಸ್‌ಬಿಐ ನಿರಾಕರಿಸಿರುವುದು ವಿಚಿತ್ರವಾಗಿದೆ ಎಂದು ಬಾತ್ರಾ ಹೇಳಿದ್ದಾರೆ. ತೆರಿಗೆದಾರರ ಹಣದಲ್ಲಿ ಸಾಳ್ವೆ ಅವರಿಗೆ ನೀಡಿರುವ ಶುಲ್ಕದ ಬಗ್ಗೆ ಮಾಹಿತಿ ನೀಡುವುದಕ್ಕೆ ಕೂಡ ಎಸ್‌ಬಿಐ ನಿರಾಕರಿಸಿದೆ ಎಂದು ಬಾತ್ರಾ ಹೇಳಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries