ನವದೆಹಲಿ: ಮತದಾನದ ಸಂದರ್ಭ ಮತಗಟ್ಟೆಯ ಸರತಿ ಸಾಲಿನಲ್ಲಿ ಬ್ರೆತ್ ಅನಾಲೈಸರ್ ಪರೀಕ್ಷೆ ನಡೆಸಲು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾ ಮಾಡಿದೆ.
ನ್ಯಾಯಮೂರ್ತಿ ಸಜೀವ್ ಖನ್ನಾ ಮತ್ತು ದೀಪಂಕರ್ ದತ್ತಾ ಅವರನ್ನೊಳಗೊಂಡ ನ್ಯಾಯಪೀಠವು, ಅರ್ಜಿ ವಜಾಗೊಳಿಸಿ, ಆಂಧ್ರಪ್ರದೇಶದ ಹೈಕೋರ್ಟ್ ನೀಡಿದ್ದ ಆದೇಶದ ವಿಷಯದಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸಿದ್ದು, ಪ್ರಚಾರದ ಹಿತಾಸಕ್ತಿಯಿಂದ ಸಲ್ಲಿಸಲಾಗಿರುವ ಅರ್ಜಿ ಎಂದು ಹೇಳಿದೆ.
ಏನಿದು? ಪ್ರಚಾರಕ್ಕಾಗಿ ಸಲ್ಲಿಸಿರುವ ಅರ್ಜಿಯೇ? ಚುನಾವಣೆ ದಿನ ಮದ್ಯ ಮಾರಾಟ ಇರುವುದಿಲ್ಲ. ಎಲ್ಲ ಕಡೆ ಪೊಲೀಸರ ನಿಯೋಜನೆ ಇರುತ್ತದೆ. ಇಂತಹ ಮನವಿಯನ್ನು ಯಾವುದೇ ಕಾರಣಕ್ಕೂ ಪುರಸ್ಕರಿಸುವುದಿಲ್ಲ ಎಂದು ಪೀಠ ಹೇಳಿದೆ.
ಈ ಸಂಬಂಧ ಜನವಾದಿ ಪಕ್ಷದ ಆಂಧ್ರಪ್ರದೇಶದ ಘಟಕವು ಹೈಕೋರ್ಟ್ ಮೆಟ್ಟಿಲೇರಿತ್ತು. ಹೈಕೋರ್ಟ್ ಅರ್ಜಿ ವಜಾಗೊಳಿಸಿದ ಬಳಿಕ ಸುಪ್ರೀಂಕೋರ್ಟ್‌ನಲ್ಲಿ ಮನವಿ ಸಲ್ಲಿಸಲಾಗಿತ್ತು.
ಮತಗಟ್ಟೆಗೆ ಪ್ರವೇಶಿಸುವ ಪ್ರತಿಯೊಬ್ಬ ವ್ಯಕ್ತಿಯನ್ನು ಮೊದಲು ಉಸಿರಾಟದ ಪರೀಕ್ಷೆಗೆ ಒಳಪಡಿಸುವುದನ್ನು ಕಡ್ಡಾಯಗೊಳಿಸಲು ಚುನಾವಣಾ ಆಯೋಗಕ್ಕೆ ಸೂಚಿಸುವ ಯಾವುದೇ ನಿರ್ದಿಷ್ಟ ಕಾನೂನು ನಿಬಂಧನೆಗಳ ಬಗ್ಗೆ ಗಮನ ಸೆಳೆಯುವಲ್ಲಿ ಅರ್ಜಿದಾರರು ವಿಫಲರಾಗಿದ್ದಾರೆ ಎಂದು ಹೈಕೋರ್ಟ್ ಹೇಳಿತ್ತು.
ಯಾವುದೇ ವ್ಯಕ್ತಿ ಮದ್ಯದಿಂದ ಉತ್ತೇಜನಗೊಂಡು ಮತ ಹಾಕುವುದನ್ನು ತಡೆಯಲು ಮತಗಟ್ಟೆಗಳ ಪ್ರವೇಶ ದ್ವಾರದಲ್ಲಿ ಬ್ರೆತ್ ಅನಾಲೈಸರ್ ಪರೀಕ್ಷೆ ನಡೆಸಲು ಚುನಾವಣಾ ಆಯೋಗಕ್ಕೆ ಸೂಚಿಸಬೇಕೆಂದು ಅರ್ಜಿದಾರರು ಕೋರಿದ್ದರು.