ಗಡ್ಚಿರೋಲಿ: ಮಹಾರಾಷ್ಟ್ರದ ಗಡ್ಚಿರೋಲಿ- ಚಿಮೂರ್ ಕ್ಷೇತ್ರದಲ್ಲಿ ಮೊದಲ ಹಂತದಲ್ಲಿ ಲೋಕಸಭೆ ಚುನಾವಣೆ ನಡೆಯಲಿದ್ದು, ಮತದಾನಕ್ಕೆ ಇನ್ನು ಮೂರು ದಿನ ಬಾಕಿ ಉಳಿದಿದೆ. ಈ ಹಿನ್ನೆಲೆ ಇಂದು (ಮಂಗಳವಾರ) 295 ಚುನಾವಣಾ ಸಿಬ್ಬಂದಿಯನ್ನು ಹೆಲಿಕಾಪ್ಟರ್‌ಗಳ ಮೂಲಕ ಬಂಡಾಯ ಪೀಡಿತ ಜಿಲ್ಲೆಯ ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಸ್ಥಳಗಳಿಗೆ ಕರೆದೊಯ್ಯುವ ಪ್ರಕ್ರಿಯೆ ಆರಂಭವಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವಿದ್ಯುನ್ಮಾನ ಮತಯಂತ್ರಗಳು (ಇವಿಎಂ) ಮತ್ತು ಇತರ ಸಲಕರಣೆಗಳನ್ನು ಗಡ್ಚಿರೋಲಿಯ ವಿವಿಧ ಸ್ಥಳಗಳಲ್ಲಿರುವ ಮತಗಟ್ಟೆಗಳಿಗೆ ಸ್ಥಳಾಂತರಿಸಲಾಗುತ್ತಿದೆ. ಅಲ್ಲಿ ಏಪ್ರಿಲ್ 19 ರಂದು ಮತದಾನ ನಡೆಯಲಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ನೀಲೋತ್ಪಾಲ್ ತಿಳಿಸಿದ್ದಾರೆ.
ಭಾರತೀಯ ವಾಯುಪಡೆ ಮತ್ತು ಸೇನೆಯ ಹೆಲಿಕಾಪ್ಟರ್‌ಗಳ ಸಹಾಯದಿಂದ ಗಡ್ಚಿರೋಲಿಯ ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಸ್ಥಳಗಳ 68 ಮತಗಟ್ಟೆಗಳಿಗೆ 295 ಸಿಬ್ಬಂದಿಯನ್ನು ಕರೆದೊಯ್ಯಲಾಗುತ್ತಿದೆ, ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆವಹಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಗಡ್ಚಿರೋಲಿ- ಚಿಮೂರ್ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ಅಶೋಕ್ ನೇಟೆ ಮತ್ತು ಕಾಂಗ್ರೆಸ್‌ನ ಡಾ. ನಾಮದೇವ್ ಕಿರ್ಸಾನ್ ಅವರ ನಡುವೆ ನೇರ ಹಣಾಹಣಿಯಿದೆ.
ಈ ಕ್ಷೇತ್ರದಲ್ಲಿ 16,12,930 ಮತದಾರರಿದ್ದಾರೆ.
ಛತ್ತೀಗಢಕ್ಕೂ ಚುನಾವಣಾ ಸಿಬ್ಬಂದಿ ನಿಯೋಜನೆ
ಛತ್ತೀಸಗಢದ ಹಲವು ಕ್ಷೇತ್ರಗಳಲ್ಲಿ ಇದೇ 19ರಂದು ಮೊದಲ ಹಂತದ ಲೋಕಸಭಾ ಚುನಾವಣೆ ನಡೆಯಲಿದೆ. ಈ ಹಿನ್ನೆಲೆ ನಕ್ಸಲ್ ಪೀಡಿತ ಪ್ರದೇಶಗಳಾದ ಬಿಜಾಪುರ್, ಛತ್ತೀಸಗಢ ಸೇರಿ ಹಲವೆಡೆ ಹೆಲಿಕಾಪ್ಟರ್ ಮೂಲಕ ಸಿಬ್ಬಂದಿ ಕರೆದೊಯ್ಯಲಾಗಿದೆ. ಈ ಪ್ರದೇಶದಲ್ಲಿ ಶಾಂತಿಯುತ ಮತ್ತು ಸುರಕ್ಷಿತ ಮತದಾನ ನಡೆಸಲು ಸೂಕ್ತ ವ್ಯವಸ್ಥೆ ಕೈಗೊಳ್ಳಲಾಗಿದೆ ಎಂದು ಸ್ಥಳೀಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.