ರಾಯಪುರ: ಛತ್ತೀಸಗಢದಲ್ಲಿ ನಡೆದಿದೆ ಎನ್ನಲಾದ ₹2,000 ಕೋಟಿ ಮೌಲ್ಯದ ಅಬಕಾರಿ ಹಗರಣದಲ್ಲಿ ನಡೆದ ಹಣ ಅಕ್ರಮ ವರ್ಗಾವಣೆ ಪ್ರಕರಣ ಸಂಬಂಧ ನಿವೃತ್ತ ಐಎಎಸ್ ಅಧಿಕಾರಿ ಅನಿಲ್ ಟುಟೇಜಾ ಅವರನ್ನು ಜಾರಿ ನಿರ್ದೇಶನಾಲಯ (ಇ.ಡಿ) ಬಂಧಿಸಿದೆ ಎಂದು ಮೂಲಗಳು ತಿಳಿಸಿವೆ.

ಈ ಸಂಬಂಧ ಜಾರಿ ನಿರ್ದೇಶನಾಲಯವು ಹೊಸ ಪ್ರಕರಣ ದಾಖಲಿಸಿದ ಬೆನ್ನಲ್ಲೇ, ಟುಟೇಜಾ ಅವರ ಬಂಧನವಾಗಿದೆ.
ಈ ಪ್ರಕರಣದ ಸಂಬಂಧ ಹೇಳಿಕೆ ದಾಖಲಿಸಲು ಅನಿಲ್ ಟುಟೇಜಾ ಮತ್ತು ಅವರ ಪುತ್ರ ಯಶ್ ಟುಟೇಜಾ ಅವರು ಶನಿವಾರ ರಾಯಪುರದಲ್ಲಿರುವ ಆರ್ಥಿಕ ಅಪರಾಧಗಳ ಘಟಕ/ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಕಚೇರಿಗೆ ಭೇಟಿ ನೀಡಿದ್ದರು. ಅಲ್ಲಿಂದಲೇ 2003ನೇ ಬ್ಯಾಚ್‌ನ ಐಎಎಸ್ ಅಧಿಕಾರಿ ಟುಟೇಜಾ ಅವರನ್ನು ಇ.ಡಿ ವಶಕ್ಕೆ ಪಡೆದಿದೆ ಎಂದು ತಿಳಿದುಬಂದಿದೆ.
ಅನಿಲ್ ಟುಟೇಜಾ ಅವರನ್ನು ವಿಚಾರಣೆ ನಡೆಸಿದ ಬಳಿಕ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯಡಿ ಬಂಧಿಸಲಾಗಿದೆ. ಅಲ್ಲದೆ, ಅವರ ಪುತ್ರ್ ಯಶ್ ಟುಟೇಜಾ ಅವರನ್ನು ಬಿಟ್ಟು ಕಳುಹಿಸಲಾಗಿದೆ.
ಅಬಕಾರಿ ಹಗರಣಕ್ಕೆ ಸಂಬಂಧಿಸಿ ಆದಾಯ ತೆರಿಗೆ ಇಲಾಖೆ ನೀಡಿದ ದೂರಿನ ಮೇರೆಗೆ ದಾಖಲಾಗಿದ್ದ ಹಣ ಅಕ್ರಮ ವರ್ಗಾವಣೆ ಪ್ರಕರಣವನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿತ್ತು. ಈ ಪ್ರಕರಣವು ಹಣ ಅಕ್ರಮ ವರ್ಗಾವಣೆ ವ್ಯಾಪ್ತಿಗೆ ಬರುವುದಿಲ್ಲ ಎಂದು ಪ್ರತಿಪಾದಿಸಿತ್ತು. ಆ ಬಳಿಕ ಜಾರಿ ನಿರ್ದೇಶನಾಲಯವು ಹೊಸ ಪ್ರಕರಣ ದಾಖಲಿಸಿತ್ತು.