ಪಾಟ್ನಾ: ದೇಶದಲ್ಲಿ ಕಾಂಗ್ರೆಸ್ ತುರ್ತುಪರಿಸ್ಥಿತಿಯನ್ನು ಹೇರಿದಾಗ ಮತ್ತು ಅದನ್ನು ಬದಲಾಯಿಸಲು ಎಲ್ಲಾ ಪ್ರಯತ್ನಗಳನ್ನು ಮಾಡಿದಾಗ ಸಂವಿಧಾನವು ಅಪಾಯದಲ್ಲಿತ್ತು ಎಂದು ಬಿಜೆಪಿ ನಾಯಕ ರವಿಶಂಕರ್ ಪ್ರಸಾದ್ ಹೇಳಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) 400 ಕ್ಕೂ ಹೆಚ್ಚು ಸ್ಥಾನಗಳನ್ನು ಗಳಿಸುವ ಸಾಧ್ಯತೆ ಹೆಚ್ಚಾಗಿರುವುದಾಗಿ ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕಸಭಾ ಚುನಾವಣೆಯಲ್ಲಿ 400 ಸ್ಥಾನ ಗೆಲುವಿನ ಬಗ್ಗೆ ಮಾತನಾಡುತ್ತೇವೆ. ಈಗಿನ ಅಂಕಿ ಅಂಶಗಳ ಪ್ರಕಾರ ಇನ್ನೂ ಹೆಚ್ಚಿನ ಸ್ಥಾನಗಳಲ್ಲಿ ಗೆಲುವು ಸಾಧಿಸುವ ಸೂಚನೆಗಳಿವೆ. ಪ್ರತಿಪಕ್ಷಗಳು ಮಾತನಾಡುವುದು ಸೋಲಿನ ಹತಾಶೆಯ ಲಕ್ಷಣವಾಗಿದೆ. ಅವರು ಕೇವಲ ಸಂವಿಧಾನ ಬದಲಾವಣೆ ಮಾತನ್ನು ಹೇಳುತ್ತಾರೆ. ಸಂವಿಧಾನ ಬದಲಾವಣೆ ಕುರಿತು ಯಾರು ಮಾತನಾಡಿದರು ಎಂದು ಪ್ರಶ್ನಿಸಿದರು.
ಸಂವಿಧಾನ ಬದಲಾಯಿಸುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ನಾವೆಲ್ಲರೂ ಸ್ಪಷ್ಟಪಡಿಸಿದ್ದೇವೆ. ಕಾಂಗ್ರೆಸ್ ಆಳ್ವಿಕೆಯಲ್ಲಿ ಸಂವಿಧಾನ ಅಪಾಯದಲ್ಲಿತ್ತು. ಕಾಂಗ್ರೆಸ್ ತುರ್ತುಪರಿಸ್ಥಿತಿ ಹೇರಿದಾಗ ಸಂವಿಧಾನ ಅಪಾಯದಲ್ಲಿತ್ತು ಎಂದರು.
ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಅವರು,ಇಡೀ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಸಂವಿಧಾನ ಬದಲಿಸುವ ಪ್ರಯತ್ನ ನಡೆದಿತ್ತು. ಇದು ಅವರ ಇತಿಹಾಸ. ಸಂವಿಧಾನ ಬದಲಾವಣೆಗೆ ಕಾಂಗ್ರೆಸ್ ಪಕ್ಷ ಎಲ್ಲಾ ಪ್ರಯತ್ನಗಳನ್ನು ಮಾಡಿದೆ ಮತ್ತು ಎಡಪಂಥೀಯ ಪಕ್ಷಗಳು ಅವರೊಂದಿಗೆ ಇದ್ದವು; ಇಂದು, ಲಾಲು ಯಾದವ್ ಅವರೊಂದಿಗಿದ್ದಾರೆ ಸಂವಿಧಾನಕ್ಕೆ ಅಪಾಯ ಎದುರಾಗಿರುವುದು ಪ್ರಧಾನಿ ನರೇಂದ್ರ ಮೋದಿ ಅಥವಾ ಬಿಜೆಪಿಯಿಂದಲ್ಲ ಎಂದು ತಿಳಿಸಿದರು.