ವಿಶಾಖಪಟ್ಟಣ : ಸಂಪತ್ತಿನ ಮರು ಹಂಚಿಕೆ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೀಡಿದ್ದ ಹೇಳಿಕೆ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿರಬೇಕಾದರೆ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕಾಂಗ್ರೆಸ್ ವಿರುದ್ಧ ಮತ್ತೊಂದು ಗಂಭೀರ ಆರೋಪ ಮಾಡಿದ್ದಾರೆ.
ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ದೇಶದ ಸೇನಾ ಪಡೆಗಳಲ್ಲಿ ಧಾರ್ಮಿಕ ಆಧಾರದಲ್ಲಿ ಗಣತಿ ಮಾಡುವುದಕ್ಕೆ ಯತ್ನಿಸಿತ್ತು. ಈ ಮೂಲಕ ದೇಶದಲ್ಲಿ ವಿಭಜನೆಯನ್ನು ಸೃಷ್ಟಿಸಲು ಯತ್ನಿಸಿತ್ತು ಎಂದು ರಕ್ಷಣಾ ಮಂತ್ರಿ ರಾಜನಾಥ್ ಸಿಂಗ್ ಹೇಳಿದ್ದಾರೆ.
ವಿಶಾಖಪಟ್ಟಣದಲ್ಲಿ ಚುನಾವಣಾ ಪ್ರಚಾರ ನಡೆಸಿದ ರಾಜನಾಥ್ ಸಿಂಗ್, ಕಾಂಗ್ರೆಸ್ ಸರ್ಕಾರದಿಂದ ರಚಿಸಲಾಗಿದ್ದ ಸಾಚಾರ ಸಮಿತಿ ವರದಿ 2006 ರಲ್ಲಿ ಸೇನಾ ಪಡೆಗಳಲ್ಲಿ ಧರ್ಮ ಆಧರಿತ ಗಣತಿ ನಡೆಸಲು ಶಿಫಾರಸ್ಸು ಮಾಡಿತ್ತು. ಈಗ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ತಾನು ಅಧಿಕಾರಕ್ಕೆ ಬಂದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರಿಗೆ ಮೀಸಲಾತಿ ನೀಡುವುದಾಗಿ ಘೋಷಿಸಿದೆ, ಇದನ್ನೇ ಸೇನಾ ಪಡೆಗಳಿಗೂ ಅನ್ವಯಿಸುವುದಾದರೆ, ಇದು ದೇಶದ ಏಕತೆ ಮತ್ತು ದೇಶದ ಸಮಗ್ರತೆಗೆ ಒಳ್ಳೆಯದಲ್ಲ ಎಂದು ರಾಜನಾಥ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.
"ಅಲ್ಪಸಂಖ್ಯಾತರ ಕಲ್ಯಾಣದ ಹೆಸರಿನಲ್ಲಿ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಏನು ಹಾಕಿದೆಯೋ ಅದು ಸಾಚಾರ್ ಸಮಿತಿಯ ವರದಿಯಲ್ಲಿನ ಆಲೋಚನೆಗಳು ಮತ್ತು ಶಿಫಾರಸುಗಳನ್ನು ಪ್ರತಿಧ್ವನಿಸುತ್ತದೆ" ಇದು ಹೆಚ್ಚು ಆತಂಕದ ಸಂಗತಿಯಾಗಿದೆ ಎಂದು ಕೇಂದ್ರ ರಕ್ಷಣಾ ಸಚಿವರು ಹೇಳಿದ್ದಾರೆ.
ಹಿಂಬಾಗಿಲ ಮೂಲಕ ಧಾರ್ಮಿಕ ಆಧಾರದಲ್ಲಿ ಮೀಸಲಾತಿಯನ್ನು ಪರಿಚಯಿಸಲು ಯತ್ನಿಸುತ್ತಿರುವ ಕಾಂಗ್ರೆಸ್ ನ ತುಷ್ಟೀಕರಣ ನೀತಿ, ಕಾಂಗ್ರೆಸ್ ನ ನಿಜ ಬಣ್ಣ ಬಯಲು ಮಾಡಿದೆ, ಪ್ರಧಾನಿ ನರೇಂದ್ರ ಮೋದಿ ಇದನ್ನು ಬಯಲು ಮಾಡಿದ್ದು ಕಾಂಗ್ರೆಸ್ ಮೋದಿ ವಿರುದ್ಧ ವಾಗ್ದಾಳಿ ನಡೆಸುತ್ತಿದೆ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.