ಕಾಸರಗೋಡು: ಜಿಲ್ಲೆ ಸೇರಿದಂತೆ ರಾಜ್ಯದಲ್ಲಿ ಮದ್ಯಮಾರಾಟದಲ್ಲಿ ಪ್ರತಿ ತಿಂಗಳ ಒಂದನೇ ತಾರೀಕಿನಂದು ಮದ್ಯಮಾರಾಟ ನಿಷೇಧ(ಡ್ರೈ ಡೇ)ಕ್ರಮವನ್ನು ಹಿಂತೆಗೆದುಕೊಳ್ಳಲು ಸರ್ಕಾರ ಚಿಂತನೆ ನಡೆಸುತ್ತಿದೆ. ಪ್ರತಿ ತಿಂಗಳ ಒಂದನೇ ತಾರೀಕಿನಂದು ಬೀವರೇಜಸ್ ಕಾರ್ಪೋರೇಶನ್‍ಗಳಲ್ಲಿ ಚಿಲ್ಲರೆ ಮದ್ಯ ಮಾರಾಟ, ಬಾರ್‍ಗಳಲ್ಲಿನ ಮದ್ಯ ಮಾರಾಟವನ್ನು ಸಂಪೂರ್ಣ ಕೈಬಿಡಲಾಗಿದೆ.
ಈ ಹಿಂದೆ ಊಮನ್‍ಚಾಂಡಿ ನೇತೃತ್ವದ ಐಕ್ಯರಂಗ ಸರ್ಕಾರ ಮದ್ಯ ಮಾರಾಟವನ್ನು ಹಂತ ಹಂತವಾಗಿ ಕಡಿತಗೊಳಿಸಲು ನಡೆಸಿರುವ ಕ್ರಮಗಳಲ್ಲಿ ಇದೂ ಒಂದಾಗಿತ್ತು. ಪ್ರತಿ ವರ್ಷ ಬೀವರೇಜಸ್ ಚಿಲ್ಲರೆ ಮದ್ಯ ಮಾರಾಟ ಕೇಂದ್ರಗಳ ಸಂಖ್ಯೆ ಕಡಿತಗೊಳಿಸುವುದಕ್ಕೂ ಸರ್ಕಾರ ತೀರ್ಮಾನಿಸಿತ್ತು.
ಪ್ರಸಕ್ತ ಒಂದನೇ ತಾರೀಕಿನಂದು ಮದ್ಯ ಮಾರಾಟಕ್ಕೆ ನಿಷೇಧ ಹೇರಿರುವುದರಿಂದ ಪ್ರವಾಸೋದ್ಯಮ ವಲಯಕ್ಕೆ ಹೆಚ್ಚಿನ ನಷ್ಟ ಉಂಟಾಗುತ್ತಿದ್ದು, ಈ ತೀರ್ಮಾನ ಕೈಬಿಡುವಂತೆ ರಾಜ್ಯ ಪ್ರವಾಸೋದ್ಯಮ ಅಬಿವೃದ್ಧಿ ನಿಗಮ ಸರ್ಕಾರಕ್ಕೆ ಮನವಿ ಮಾಡಿಕೊಂಡಿತ್ತು. ನಿಗಮದ ಬೇಡಿಕೆಯನ್ನು ಸಕಾರಾತ್ಮಕವಾಗಿ ಪರಿಗಣಿಸಿರುವ ಸರ್ಕಾರ, ಪ್ರಸಕ್ತ ಜಾರಿಯಲ್ಲಿರುವ ಒಂದನೇ ತಾರೀಕಿನಂದು ಮದ್ಯದಂಗಡಿ, ಬಾರ್ ಮುಚ್ಚುವ ತೀರ್ಮಾನ ಪುನರ್ ಪರಿಶೀಲಿಸಲು ಸರ್ಕಾರ ಮುಂದಾಗಿದೆ. ಬೀವರೇಜಸ್ ಕಾರ್ಪೋರೇಶನ್ ಬೇಡಿಕೆಯನ್ವಯ ಚಿಲ್ಲರೆ ಮದ್ಯಮಾರಟ ಔಟ್‍ಲೆಟ್‍ಗಳ ಸಂಖ್ಯೆಯನ್ನೂ ಇತ್ತೀಚೆಗೆ ಸರ್ಕಾರ ಹೆಚ್ಚಿಸಿತ್ತು. ಪ್ರತಿ ತಿಂಗಳ ಒಂದನೇ ತಾರೀಕಿನಂದು ಡ್ರೈಡೇ ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ಲಭಿಸುವ ಆದಾಯದಲ್ಲೂ ಕಡಿತವುಂಟಾಗುತ್ತಿತ್ತು.