ವಾಟ್ಸ್ ಆಯಪ್ ಸಂದೇಶಗಳ ಎನ್‍ಕ್ರಿಪ್ಷನ್ ಭೇದಿಸಲು ಕಡ್ಡಾಯಪಡಿಸಿದರೆ ಭಾರತದಿಂದ ನಿರ್ಗಮಿಸುವುದಾಗಿ ಮೆಟಾ ಒಡೆತನದ ವಾಟ್ಸ್ ಆಯಪ್ ದಿಲ್ಲಿ ಹೈಕೋರ್ಟ್‍ಗೆ ತಿಳಿಸಿದೆ.
ವಾಟ್ಸ್ ಆಯಪ್ ಪರವಾಗಿ ಕೋರ್ಟ್‍ನಲ್ಲಿ ಹಾಜರಾದ ವಕೀಲರು ಈ ಹೇಳಿಕೆ ನೀಡಿದ್ದಾರೆ.
ವಾಟ್ಸ್ ಆಯಪ್ ಮತ್ತು ಅದರ ಮಾತೃಸಂಸ್ಥೆಯಾದ ಫೇಸ್‍ಬುಕ್ ಇನ್‍ಕಾರ್ಪೊರೇಷ್, ಭಾರತ ಸರ್ಕಾರ ಸಾಮಾಜಿಕ ಜಾಲತಾಣಗಳಿಗಾಗಿ ಜಾರಿಗೆ ತಂದಿರುವ 2021 ಮಾಹಿತಿ ತಂತ್ರಜ್ಞಾನ ನಿಯಮಾವಳಿಯನ್ನು ಪ್ರಶ್ನಿಸಿ ಸಲ್ಲಿಸಿದ ದಾವೆಯ ವಿಚಾರಣೆ ವೇಳೆ ಗುರುವಾರ ಹೈಕೋರ್ಟ್‍ನಲ್ಲಿ ಸಂಸ್ಥೆಯ ಪರ ವಕೀಲರು ಈ ಹೇಳಿಕೆ ನೀಡಿದರು. ಇದರ ಅನ್ವಯ ಮಾಧ್ಯಮ ಮಧ್ಯವರ್ತಿಗಳು ಮೆಸೇಜಿಂಗ್ ಆಯಪ್‍ಗಳ ಸಂದೇಶದ ಮೂಲವನ್ನು ಪತ್ತೆ ಮಾಡುವುದು ಅಗತ್ಯ ಮತ್ತು ಈ ಮಾಹಿತಿಯನ್ನು ಪ್ರಥಮವಾಗಿ ಸಿದ್ಧಪಡಿಸಿದವರ ಮೂಲವನ್ನು ಕಂಡುಹಿಡಿಯಬೇಕಾಗುತ್ತದೆ.
ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿಗಳ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮಾಧ್ಯಮ ಸಂಹಿತೆ) ನಿಯಮಾವಳಿ-2021ನ್ನು ಕೇಂದ್ರ ಸರ್ಕಾರ 2021ರ ಫೆಬ್ರವರಿ 25ರಂದು ಘೋಷಿಸಿತ್ತು. ಇದರ ಪ್ರಕಾರ, ದೊಡ್ಡ ಸಾಮಾಜಿಕ ಜಾಲತಾಣ ಮಾಧ್ಯಮಗಳಾದ ಟ್ವಿಟರ್, ಫೇಸ್‍ಬುಕ್, ಇನ್‍ಸ್ಟಾಗ್ರಾಂ ಮತ್ತು ವಾಟ್ಸ್ ಆಯಪ್ ಗಳು ಈ ನಿಯಮಗಳನ್ನು ಪಾಲಿಸಬೇಕಾಗುತ್ತದೆ.
ಸಂಸ್ಥೆಯ ಪರವಾಗಿ ಹಾಜರಾದ ವಕೀಲ ತೇಜಸ್ ಕರಿಯಾ, ಹಂಗಾಮಿ ಮುಖ್ಯ ನ್ಯಾಯಮೂರ್ತಿ ಮನಮೋಹನ್ ಮತ್ತು ನ್ಯಾಯಮೂರ್ತಿ ಮನ್ಮೀತ್ ಪ್ರೀತಮ್ ಸಿಂಗ್ ಅರೋರಾ ಅವರಿದ್ದ ಪೀಠಕ್ಕೆ ಮಾಹಿತಿ ನೀಡಿ, "ಜಾಲತಾಣವಾಗಿ ನಾವು ಹೇಳುವುದೇನೆಂದರೆ, ಎನ್‍ಕ್ರಿಪ್ಷನ್ ಭೇಧಿಸಲು ನಮಗೆ ಸೂಚಿಸಿದರೆ, ವಾಟ್ಸ್ ಆಯಪ್ ಹೋಗುತ್ತದೆ" ಎಂದು ವಿವರಿಸಿದರು.