ನವದೆಹಲಿ: ಮಣಿಪುರದ ಜನಾಂಗೀಯ ಘರ್ಷಣೆಯನ್ನು ವಿರೋಧಿಸಿ ಆಮರಣಾಂತ ಉಪವಾಸ ಕೈಗೊಂಡಿರುವುದಕ್ಕಾಗಿ ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್ ರದ್ದುಗೊಳಿಸುವಂತೆ ನಿರ್ದೇಶನ ನೀಡುವಂತೆ ಕೋರಿ ಲಿಂಗತ್ವ ಅಲ್ಪಸಂಖ್ಯಾತರೊಬ್ಬರು ಸಲ್ಲಿಸಿದ್ದ ಅರ್ಜಿ ವಿಚಾರಣೆಗೆ ಸುಪ್ರೀಂ ಕೋರ್ಟ್ ನಿರಾಕರಿಸಿದೆ.

ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ತ್ರಿಸದಸ್ಯ ಪೀಠವು, ಅರ್ಜಿದಾರರಾದ ಮಾಲೆಮ್ ಥೊಂಗಮ್ ಅವರಿಗೆ, ಮಣಿಪುರ ಹೈಕೋರ್ಟ್ ಮೊರೆ ಹೋಗುವಂತೆ ಸೂಚಿಸಿದೆ.
ಫೆಬ್ರವರಿ 22ರಂದು ದೆಹಲಿ ವಿಶ್ವವಿದ್ಯಾಲಯದಲ್ಲಿ ಥೊಂಗಮ್ ಉಪವಾಸ ಸತ್ಯಾಗ್ರಹ ಪ್ರಾರಂಭಿಸಿದರು. ಬಳಿಕ ಫೆ. 27ರಂದು ಅವರು ದೆಹಲಿಯಿಂದ ಮಣಿಪುರಕ್ಕೆ ತೆರಳಿದರು. ಮಣಿಪುರದ ಇಂಫಾಲ್‌ನ ಕಾಂಗ್ಲಾ ಪಶ್ಚಿಮ ಗೇಟ್‌ನಲ್ಲಿ ಉಪವಾಸ ಮುಂದುವರೆಸಿದರು.
ಮಾ.2 ರಂದು ಥೊಂಗಮ್ ಅವರನ್ನು ಆತ್ಮಹತ್ಯೆಯ ಪ್ರಯತ್ನ ಹಾಗೂ ಗುಂಪುಗಳ ನಡುವೆ ದ್ವೇಷ ಮೂಡಿಸಲು ಯತ್ನಿಸಿದ ಆರೋಪದ ಅಡಿ ಮಣಿಪುರ ಪೊಲೀಸರು ಬಂಧಿಸಿದ್ದರು. ಬಳಿಕ ಮಾ. 5ರಂದು ಬಿಡುಗಡೆ ಮಾಡಿದ್ದರು. ಇದಾದ ನಂತರ ಸಾರ್ವಜನಿಕವಾಗಿ ಪ್ರತಿಭಟನೆ ನಡೆಸಿದ ಆರೋಪದ ಅಡಿ ಥೊಂಗಮ್ ಅವರನ್ನು ಮತ್ತೆ ಬಂಧಿಸಲಾಯಿತು.
ಮೈತೇಯಿ ಸಮುದಾಯವನ್ನು ಪರಿಶಿಷ್ಟ ಪಂಗಡಗಳ ಪಟ್ಟಿಗೆ ಸೇರಿಸುವ ಬಗ್ಗೆ ಪರಿಗಣಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದ ಬಳಿಕ ರಾಜ್ಯದಲ್ಲಿ ಘರ್ಷಣೆ ಭುಗಿಲೆದ್ದಿದೆ.