ತಿರುವನಂತಪುರ: ಕಾಸರಗೋಡು: ಬಿಸಿಲಿನ ಆಘಾತದಿಂದ ಕೇರಳದಲ್ಲಿ ಕಳೆದ ಎರಡು ದಿವಸಗಳಲ್ಲಿ ಮಹಿಳೆ ಸೇರಿದಂತೆ ಮೂವರು ಮೃತಪಟ್ಟಿದ್ದಾರೆ. ಪಾಲ್ಘಾಟ್ ಜಿಲ್ಲೆಯ ಎಲಿಪುಳ ಪಳ್ಳಿತ್ತರ ನಿವಾಸಿ ಲಕ್ಷ್ಮಿಯಮ್ಮ(89), ಮಾಹಿ ಪಂದಕ್ಕಲ್ ಪಂತೋಟಿಕಾಟಿಲ್ ನಿವಾಸಿ ಯು.ಎನ್ ವಿಶ್ವನಾಥನ್(53) ಹಾಗೂ ಇಡುಕ್ಕಿ ಕಾಳಿಯಾರ್ ಮುಳ್ಳೇರಿಂಗಾಡ್ ನಿವಾಸಿ ಸುರೇಂದ್ರನ್(73)ಮೃತಪಟ್ಟವರು.
ಲಕ್ಷ್ಮೀಅಮ್ಮ ಮನೆಯಿಂದ ಹೊರ ಹೋದವರು ವಾಪಸಾಗದಿರುವುದರಿಂದ ಮನೆಯವರು ಹುಡುಕಾಟ ನಡೆಸುವ ಮಧ್ಯೆ ಮನೆ ಸನಿಹದ ಕಾಲುವೆ ಬಳಿ ಬಿಸಿಲ ತಾಪಕ್ಕೆ ಕುಸಿದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ವಿಶ್ವನಾಥನ್ ಬಾವಿ ನಿರ್ಮಾಣ ಕೆಲಸದ ಮಧ್ಯೆ ಬಿಸಿಲ ತಾಪ ಸಹಿಸಲಾಗದೆ ಕುಸಿದು ಬಿದ್ದು ಮೃತಪಟ್ಟಿದ್ದರು. ಸುರೇಂದ್ರನ್ ಅವರು ಏ.10ರಂದು ನಡೆದುಹೋಗುತ್ತಿರುವ ಮಧ್ಯೆ ಕುಸಿದು ಬಿದ್ದ ಇವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದರೂ ಫಲಕಾರಿಯಾಗದೆ, ಭಾನುವಾರ ಮೃತಪಟ್ಟಿದ್ದಾರೆ. ಮೂರೂ ಸಾವು ಬಿಸಿಲಿನಾಘಾತದಿಂದ ನಡೆದಿರುವುದಾಗಿ ಆರೋಗ್ಯ ಇಲಾಖೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಪಾಲ್ಘಾಟ್ ಜಿಲ್ಲೆಯಲ್ಲಿ ಗರಿಷ್ಠ ತಾಪಮಾನ 41.08ಡಿಗ್ರಿ ಸೆಲ್ಶಿಯಸ್‍ಗೆ ಏರಿದೆ. ಕಾಸರಗೋಡು ಜಿಲ್ಲೆಯಲ್ಲೂ ಬಿಸಿಲಿನ ತಾಪ ಏರಿಕೆಯಾಗುತ್ತಿದ್ದು, ಆರೋಗ್ಯ ಇಲಾಖೆ ಜಾಗ್ರತಾ ನಿದೆಸ ನೀಡಿದೆ. ಹೆಚ್ಚುತ್ತಿರುವ ತಾಪಮಾನ ಹಿನ್ನೆಲೆಯಲ್ಲಿ ಕಾಸರಗೋಡು ಸೆರಿದಂತೆ 11ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಿದೆ. ರಾಜ್ಯದಲ್ಲಿ ದೈನಂದಿನ ವಿದ್ಯುತ್ ಬಳಕೆಯಲ್ಲೂ ಗಣನೀಯ ಹೆಚ್ಚಳವುಂಟಾಗಿದ್ದು, ಪ್ರತಿ ದಿನ 11ಕೋಟಿ ಯೂನಿಟ್ ತಲುಪಿದೆ. ಷಟ್ಪಥ ಅಭಿವೃದ್ಧಿ, ಕಟ್ಟಡ ನಿರ್ಮಾಣ ಸೇರಿದಂತೆ ವಿವಿಧ ಕಾಮಗಾರಿಗಳಿಗಾಗಿ ಲಕ್ಷಾಂತರ ಸಂಖ್ಯೆಯಲ್ಲಿ ಮರಗಳನ್ನು ಕಡಿದುರುಳಿಸಲಾಗಿದ್ದು, ಇದರಿಂದಾಗಿ ರಾಜ್ಯದಲ್ಲಿ ಬಿಸಿಲಿನ ತಾಪ ಮತ್ತಷ್ಟು ಏರಿಕೆಯಾಗಲು ಕಾರಣವಾಗಿರುವುದಾಗಿ ಪರಿಸರ ಪ್ರೇಮಿಗಳು ತಿಳಿಸುತ್ತಾರೆ. ಈ ಮಧ್ಯೆ ಮೇ ತಿಂಗಳ ಮೊದಲ ವಾರದಲ್ಲಿ ಬೇಸಿಗೆ ಮಳೆಯಾಗುವ ಸಾಧ್ಯತೆಯಿರುವುದಾಗಿ ಹವಾಮಾನ ಇಲಾಖೆ ತಿಳಿಸಿದೆ.