ಕಾಸರಗೋಡು: ಜಿಲ್ಲೆಯಲ್ಲಿ ಎಲ್ಲಾ ಚುನಾವಣಾ ಚಟುವಟಿಕೆಗಳು ಪಾರದರ್ಶಕವಾಗಿದ್ದು, ಇವಿಎಂ, ವಿವಿಪ್ಯಾಟ್ ಚಟುವಟಿಕೆಗಳ ಬಗ್ಗೆ ಆತಂಕ ಪಡಬೇಕಾದ ಅಗತ್ಯವಿಲ್ಲ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆದ ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್ ತಿಳಿಸಿದ್ದಾರೆ.
ಅವರು ಗುರುವಾರ ಜಿಲ್ಲಾಧಿಕಾರಿ ಚೇಂಬರ್‍ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕಾಸರಗೋಡು ಲೋಕಸಭಾ ಕ್ಷೇತ್ರದ ಎಲ್ಲಾ ಅಭ್ಯರ್ಥಿಗಳಿಗೆ, ಅವರ ಏಜೆಂಟ್‍ಗಳಿಗೆ ನೋಟೀಸ್ ನೀಡಿ, ಪತ್ರಿಕಾ ಪ್ರಕಟಣೆ ಹೊರಡಿಸಿದ ನಂತರ ಅವರ ಉಪಸ್ಥಿತಿಯಲ್ಲಿ ಇವಿಎಂ, ವಿವಿ ಪಾಟ್ ಕಮಿಷನಿಂಗ್ ನಡೆಸಲಾಗಿದೆ. ಈ ಮಧ್ಯೆ ನಿರ್ದಿಷ್ಟ ಅಭ್ಯರ್ಥಿಯೊಬ್ಬರಿಗೆ ಮತ ಚಲಾಯಿಸದಿದ್ದರೂ, ಮತ ಗಣನೆಗೆ ಬರುತ್ತಿರುವುದಾಗಿ ಇಬ್ಬರು ಅಭ್ಯರ್ಥಿಗಳ ಏಜೆಂಟರು ಆರೋಪಿಸಿರುವ ಹಿನ್ನೆಲೆಯಲ್ಲಿ ಸಹಾಯಕ ಚುನಾವಣಾಧಿಕಾರಿ, ಭೆಲ್ ಸಂಸ್ಥೆ ಎಂಜಿನಿಯರ್‍ಗಳು, ಅಭ್ಯರ್ಥಿಗಳು ಮತ್ತು ಏಜೆಂಟರ ಉಪಸ್ಥಿತಿಯಲ್ಲಿ ಅನುಮಾನ ವ್ಯಕ್ತಪಡಿಸಿರುವ ಅದೇ ವಿವಿಪಾಟ್ ಮೂಲಕ ಅಣಕು ಮತದಾನ ನಡೆಸಿ ಸಾವಿರ ಮತಗಳನ್ನು ದಾಖಲಿಸಿ ಮನವರಿಕೆ ಮಾಡಿಕೊಡಲಾಗಿದೆ.
ಈ ಬಗ್ಗೆ ಮನವರಿಕೆ ಮಾಡಿಕೊಟ್ಟ ನಂತರ ಅಭ್ಯರ್ಥಿಯ ಏಜೆಂಟರು ಪ್ರಮಾಣ ಪತ್ರಕ್ಕೆ ಸಹಿ ಹಾಕಿದ ನಂತರ ಕಮಿಷನಿಂಗ್ ಪೂರ್ತಿಗೊಳಿಸಲಾಗಿದೆ. ಜಿಲ್ಲೆಯ ಚುನಾವಣಾ ಇವಿಎಂ ವಿವಿಪ್ಯಾಟ್ ಕಾರ್ಯಾಚರಣೆ ಮತ್ತು ಕಾರ್ಯಾರಂಭದ ಬಗ್ಗೆ ಯಾವುದೇ ಅನುಮಾನ ಮತ್ತು ಆತಂಕ ಬೇಡ ಎಂದು ಹೇಳಿದರು. ಕಾರ್ಯಾಚರಣೆಯ ಸಂಪೂರ್ಣ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ. ಅಗತ್ಯವಿದ್ದಲ್ಲಿ ಇದನ್ನು ಪರಿಶೀಲಿಸಬಹುದು ಎಂದು ತಿಳಿಸಿದರು. ಈಗಾಗಲೇ ಎರಡು ಅಣಕು ಮತದಾನ ನಡೆಸಲಾಗಿದ್ದು, ಮತದಾನದ ದಿನದಂದು ಅಣಕು ಮತದಾನ ನಡೆಸಿದ ನಂತರ ಯಥಾರ್ಥ ಮತದಾನ ಆರಂಭಗೊಳ್ಳುವುದು. ಮೂರು ಹಂತದ ಪ್ರಕ್ರಿಯೆಯಲ್ಲಿ ಯಾವುದೇ ಸಂಶಯ, ಆತಂಕ ಬೇಕಾಗಿಲ್ಲ. ಚುನಾವಣೆಯ ಎಲ್ಲಾ ಕಾರ್ಯಚಟುವಟಿಕೆಗಳು ಅತ್ಯಂತ ಪಾರದರ್ಶಕವಾಗಿದ್ದು, ಸದ್ಯ ಯಾವುದೇ ಸಮಸ್ಯೆ ಇಲ್ಲ. ಆಧಾರ ರಹಿತ, ಸುಳ್ಳು ಪ್ರಚಾರಗಳಿಗೆ ಕಿವಿಗೊಡಬಾರದು ಎಂದು ಜಿಲ್ಲಾಧಿಕಾರಿ ತಿಳಿಸಿದರು.