ನವದೆಹಲಿ: ಅಲೋಪಥಿಯನ್ನು ಅವಮಾನಿಸುವ ಯಾವ ಯತ್ನವನ್ನೂ ನಡೆಸುವಂತೆ ಇಲ್ಲ ಎಂದು ಯೋಗ ಗುರು ಬಾಬಾ ರಾಮದೇವ ಮತ್ತು ಅವರ ಆಪ್ತ ಬಾಲಕೃಷ್ಣ ಅವರಿಗೆ ಸುಪ್ರೀಂ ಕೋರ್ಟ್ ಮಂಗಳವಾರ ಎಚ್ಚರಿಕೆ ನೀಡಿದೆ.
ಅಲ್ಲದೆ, ತಪ್ಪುದಾರಿಗೆ ಎಳೆಯುವ ಜಾಹೀರಾತು ಪ್ರಕರಣದಲ್ಲಿ ಪತಂಜಲಿ ಆಯುರ್ವೇದ್ ಲಿಮಿಟೆಡ್ ಕಂಪನಿಯ ವಿರುದ್ಧ ದಾಖಲಿಸಿರುವ ನ್ಯಾಯಾಂಗ ನಿಂದನೆ ಮೊಕದ್ದಮೆಗೆ ಸಂಬಂಧಿಸಿದಂತೆ ಒಂದು ವಾರದಲ್ಲಿ ಬಹಿರಂಗ ಕ್ಷಮಾಪಣೆ ಕೇಳಲು, ಪಶ್ಚಾತ್ತಾಪ ವ್ಯಕ್ತಪಡಿಸಲು ಅವರಿಬ್ಬರಿಗೂ ಅನುವು ಮಾಡಿಕೊಟ್ಟಿದೆ.
ಆದರೆ ಇವರಿಬ್ಬರನ್ನು ಕಾನೂನಿನ ಕುಣಿಕೆಯಿಂದ ಬಿಟ್ಟುಬಿಡುವ ಬಗ್ಗೆ ತೀರ್ಮಾನ ಕೈಗೊಂಡಿಲ್ಲ ಎಂಬುದನ್ನು ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಮತ್ತು ಅಹ್ಸಾನುದ್ದೀನ್ ಅಮಾನುಲ್ಲಾ ಅವರು ಇದ್ದ ವಿಭಾಗೀಯ ಪೀಠವು ಸ್ಪಷ್ಟಪಡಿಸಿದೆ.
ಭಾರತೀಯ ವೈದ್ಯಕೀಯ ಸಂಘವು (ಐಎಂಎ) 2022ರಲ್ಲಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಪೀಠ ನಡೆಸುತ್ತಿದೆ. ಪತಂಜಲಿ ಆಯುರ್ವೇದ್ ಕಂಪನಿಯು ಅಲೋಪಥಿ ವಿಚಾರದಲ್ಲಿ ತಪ್ಪುದಾರಿಗೆ ಎಳೆಯುವ ಜಾಹೀರಾತು ನೀಡಿದೆ ಎಂದು ಅರ್ಜಿದಾರರು ದೂರಿದ್ದಾರೆ.
ರಾಮದೇವ ಮತ್ತು ಬಾಲಕೃಷ್ಣ ಅವರ ವಕೀಲ ಮುಕುಲ್ ರೋಹಟಗಿ, 'ಪಶ್ಚಾತ್ತಾಪ ವ್ಯಕ್ತಪಡಿಸಲು ಸಾರ್ವಜನಿಕವಾಗಿ ಕ್ಷಮೆಯಾಚಿಸಲು' ಇಬ್ಬರೂ ಸಿದ್ಧರಿದ್ದಾರೆ ಎಂಬುದನ್ನು ಪೀಠಕ್ಕೆ ತಿಳಿಸಿದರು. ಪೀಠವು ಮುಂದಿನ ವಿಚಾರಣೆಯನ್ನು ಏಪ್ರಿಲ್ 23ಕ್ಕೆ ನಿಗದಿ ಮಾಡಿದೆ.
ವಿಚಾರಣೆಯ ಸಂದರ್ಭದಲ್ಲಿ ನ್ಯಾಯಮೂರ್ತಿಗಳು, ರಾಮದೇವ ಮತ್ತು ಬಾಲಕೃಷ್ಣ ಅವರೊಂದಿಗೆ ಮಾತುಕತೆ ನಡೆಸಿದರು. ಕೋರ್ಟ್‌ಗೆ ಕೊಟ್ಟಿದ್ದ ಮಾತು ಹಾಗೂ ಕೋರ್ಟ್‌ನ ಆದೇಶವನ್ನು ಮೀರಿ ನಡೆದುಕೊಂಡಿದ್ದು ಏಕೆ ಎಂದು ಪ್ರಶ್ನಿಸಿದರು.
'ನಾನು ಮಾಡಿದ ತಪ್ಪಿಗೆ ಬೇಷರತ್ ಕ್ಷಮೆ ಯಾಚಿಸಿದ್ದೇನೆ' ಎಂದು ರಾಮದೇವ ಅವರು ಕೈಮುಗಿದು ಹೇಳಿದರು. ಅಲ್ಲದೆ, ಕೋರ್ಟ್‌ಗೆ ಅಗೌರವ ತೋರಿಸುವ ಯಾವ ಉದ್ದೇಶವೂ ತಮಗೆ ಇರಲಿಲ್ಲ ಎಂದು ತಿಳಿಸಿದರು.
'ನಾನು ಹಿಂದೆ ಮಾಡಿದ್ದನ್ನು ಮಾಡಬಾರದಾಗಿತ್ತು. ಇನ್ನು ಮುಂದೆ ಇದನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳುಕೊಳ್ಳುವೆ. ಕೆಲಸದ ಹುರುಪಿನಲ್ಲಿ ಆ ರೀತಿ ಆಗಿಹೋಯಿತು' ಎಂದರು. ಬಾಲಕೃಷ್ಣ ಅವರೂ ಕ್ಷಮೆ ಯಾಚಿಸಿದರು.
'ಆಯುರ್ವೇದ, ಯೋಗ, ಅಲೋಪಥಿ, ಯುನಾನಿಯಂತಹ ಹಲವು ವೈದ್ಯಶಾಸ್ತ್ರಗಳು ಭಾರತದಲ್ಲಿ ಇವೆ. ಜನರು ಅವೆಲ್ಲವನ್ನೂ ಬಳಸುತ್ತಾರೆ. ಯಾವುದೋ ಒಂದು ಪದ್ಧತಿ ಕೆಟ್ಟದ್ದು, ಅದನ್ನು ಬಳಸಬಾರದು ಎಂದು ಹೇಳುವುದು ಸರಿಯಲ್ಲ' ಎಂದು ಪೀಠವು ಕಿವಿಮಾತು ಹೇಳಿತು.
ಆದೇಶ ಮೀರಿ ನಡೆದುಕೊಂಡಿದ್ದೇಕೆ ಎಂದು ಪ್ರಶ್ನಿಸಿದ ಕೋರ್ಟ್ ಪಶ್ಚಾತ್ತಾಪ ವ್ಯಕ್ತಪಡಿಸಲು ಅನುವು ಮಾಡಿಕೊಟ್ಟ ಪೀಠ
- ನ್ಯಾಯಮೂರ್ತಿ ಅಹ್ಸಾನುದ್ದೀನ್ ಅಮಾನುಲ್ಲಾನೀವು ಅಲೋಪಥಿಯನ್ನು ಅಗೌರವದಿಂದ ಕಾಣುವಂತಿಲ್ಲ. ನಿಮ್ಮ ಕೆಲಸ ನೀವು ಮಾಡಿ. ನೀವು ಬಹಳ ಒಳ್ಳೆಯ ಕೆಲಸ ಮಾಡುತ್ತಿದ್ದೀರಿ