ಕಾಸರಗೋಡು: ಕೇರಳದಲ್ಲಿ ಬಿಜೆಪಿ ಮತ್ತು ಮೋದಿ ಬಗ್ಗೆ ಮೌನ ಪಾಲಿಸುತ್ತಿರುವ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ರಾಹುಲ್ ಗಾಂಧಿಯನ್ನು ಮಾತ್ರವೇ ಟೀಕಿಸುತ್ತಿದ್ದಾರೆ. ಎಡರಂಗ ಸರ್ಕಾರ ಮಾಡಿದ ಸಾಧನೆಗಳಾದರೂ ಏನು ಎಂಬುದನ್ನು ಹೇಳಲು ಸಾಧ್ಯವಾಗದ ಸ್ಥಿತಿ ಮುಖ್ಯಮಂತ್ರಿಗೆ ಉಂಟಾಗಿದೆ. ಕೇರಳದಲ್ಲಿ ಎಡರಂಗದ ವಿರುದ್ಧ ಜನಾಕ್ರೋಶ ತಲೆದೋರಿದೆ. ಬಿಜೆಪಿ ಮತ್ತು ಸಿಪಿಎಂ ಪರಸ್ಪರ ಒಳ ಒಪ್ಪಂದ ಮಾಡಿಕೊಂಡಿದೆ ಎಂದು ಕಾಂಗ್ರೆಸ್‍ನ ಹಿರಿಯ ನಾಯಕ ರಮೇಶ್ ಚೆನ್ನಿತ್ತಲ ಆರೋಪಿಸಿದರು.
ಕಾಸರಗೋಡು ಪ್ರೆಸ್‍ಕ್ಲಬ್‍ನಲ್ಲಿ ನಡೆದ `ಜನಸಭೆ' ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಾಮ ಪಕ್ಷಗಳ ಬೆಂಬಲದೊಂದಿಗೆ ಇಂಡಿಯಾ ಒಕ್ಕೂಟ ಈ ಬಾರಿ ಕೇಂದ್ರದಲ್ಲಿ ಅಧಿಕಾರಕ್ಕೇರಲಿದೆ ಎಂದ ಅವರು ಈ ಹಿಂದೆ ಇದ್ದ ರೀತಿಯ ಮೋದಿ ಅಲೆ ಭಾರತದಲ್ಲಿ ಇಂದಿಲ್ಲ. ಪ್ರಜಾತಂತ್ರ ಮತ್ತು ಧರ್ಮನಿರಪೇಕ್ಷತೆಯನ್ನು ಸಂರಕ್ಷಿಸುವುದರ ಜೊತೆಗೆ ಕೋಮು ವಾದವನ್ನು ಹಿಮ್ಮೆಟ್ಟಿಸಬೇಕಾಗಿರುವುದು ಅತೀ ಅಗತ್ಯವಾಗಿದೆ. ಈ ಉದ್ದೇಶದಿಂದಲೇ ಇಂಡಿಯಾ ಎಂಬ ಹೆಸರಿನಲ್ಲಿ ವಿಪಕ್ಷಗಳ ಒಕ್ಕೂಟ ರಚಿಸಲಾಗಿದೆ. ಮೋದಿ ಇನ್ನಷ್ಟು ಅಧಿಕಾರಕ್ಕೇರಿದಲ್ಲಿ ದೇಶದಲ್ಲಿ ಮುಂದೆ ಚುನಾವಣೆಯೇ ನಡೆಯದು. ಇದನ್ನು ತಡೆಗಟ್ಟಲು ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೇರಬೇಕಾಗಿರುವುದು ಅನಿವಾರ್ಯವಾಗಿದೆ ಎಂದರು.