ಕಾಸರಗೋಡು: ಐಶ್ವರ್ಯದ ಸಂಕೇತ, ಕೃಷಿ ಸಂಸ್ಕøತಿಯನ್ನು ಬಿಂಬಿಸುವ ವಿಷುವನ್ನು ಏ 14ರಂದು ಕೇರಳದ ಜನತೆ ಆಚರಿಸಲಿದ್ದಾರೆ. ಜ್ಯೋತಿಶಾಸ್ತ್ರದ ಪ್ರಕಾರ ಹೊಸ ವರ್ಷದ ಆರಂಭ ಹಾಗೂ ಕೇರಳದಲ್ಲಿ ವಸಂತ ಕಾಲದ ಆಗಮನವನ್ನು ಸೂಚಿಸುವ ಹಬ್ಬವಾಗಿದೆ.
ಇನ್ನು ಕೊನ್ನೆ(ಕೊಂದೆ)ಹೂವಿಲ್ಲದೆ ವಿಷು ಹಬ್ಬ ಅಪೂರ್ಣ ಎಂದೇ ಹೇಳಬೇಕು. ದೇವಾಲಯ, ದೈವಸ್ಥಾನ, ತರವಾಡು ಮನೆ ಸೇರಿದಂತೆ ನಾನಾ ಕಡೆ ವಿಷು ಕಣಿ ಇರಿಸುವುದು ಸಂಪ್ರದಾಯ. ಮುಂಜಾನೆ ವೇಳೆ ಅಕ್ಕಿ, ತರಕಾರಿ, ಹಣ್ಣುಹಂಪಲು, ಪುಷ್ಪಗಳನ್ನೊಳಗೊಂಡ ವಿಷು ಕಣಿ ದರ್ಶನ ಮಾಡಿದ ನಂತರವೇ ವಿಷು ದಿನವನ್ನು ಆರಂಭಿಸುತ್ತಾರೆ. ದೆವಾಲಯಗಳಲ್ಲಿ ವಿಶೇಷ ಪೂಜೆ, ವಿಷು ಕಣಿ ದರ್ಶನ ನಡೆಯುವುದು. ಶಬರಿಮಲೆ ಶ್ರಿ ಅಯ್ಯಪ್ಪ ದೇಗುಲ, ಗುರುವಾಯೂರು ಶ್ರೀ ಕೃಷ್ಣ ದೇವಾಲಯ, ಕಾಸರಗೊಡಿನ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನ ಸೇರಿದಂತೆ ನಾಣಾ ದೇಗುಲಗಳಲ್ಲಿ ವಿಶೇಷ ಪೂಜೆ, ವಿಷು ಕಣಿದರ್ಶನ ಆಯೋಜಿಸಲಾಗುತ್ತಿದೆ.