HEALTH TIPS

ಪ್ರಜಾಸತ್ತಾತ್ಮಕ ಲಾಭಾಂಶ ಪಡೆಯದ ಭಾರತ: ರಘುರಾಮ್‌ ರಾಜನ್‌

 ವಾಷಿಂಗ್ಟನ್‌: ಭಾರತವು ಪ್ರಜಾಸತ್ತಾತ್ಮಕ ಲಾಭಾಂಶವನ್ನು ಪಡೆಯುತ್ತಿಲ್ಲ ಎಂದು ಹೇಳಿರುವ ಆರ್‌ಬಿಐ ಮಾಜಿ ಗವರ್ನರ್‌ ರಘುರಾಮ್‌ ರಾಜನ್‌, ಮಾನವ ಬಂಡವಾಳವನ್ನು ಸುಧಾರಿಸಲು ಮತ್ತು ಕೌಶಲ ಹೆಚ್ಚಿಸಲು ಗಮನಹರಿಸಬೇಕಾದ ಅಗತ್ಯವಿದೆ ಎಂದು ಮಂಗಳವಾರ ಪ್ರತಿಪಾದಿಸಿದ್ದಾರೆ.

ಜಾರ್ಜ್‌ ವಾಷಿಂಗ್ಟನ್‌ ವಿಶ್ವವಿದ್ಯಾಲಯದಲ್ಲಿ ನಡೆದ 'ಭಾರತವನ್ನು 2047ರ ಹೊತ್ತಿಗೆ ಸುಧಾರಿತ ಆರ್ಥಿಕತೆಯನ್ನಾಗಿ ಮಾಡುವುದು ಹೇಗೆ: ಅದರ ಅಗತ್ಯಗಳೇನು?' ಎಂಬ ವಿಷಯ ಕುರಿತ ಸಮಾವೇಶದಲ್ಲಿ ಅವರು ಮಾತನಾಡಿದ್ದಾರೆ.

'ನಮ್ಮ ಯುವ ಜನರಿಗೆ ಉದ್ಯೋಗಗಳನ್ನು ನೀಡದ ಕಾರಣ ಜನಸಂಖ್ಯೆಯ ಲಾಭಾಂಶವನ್ನು ಕಳೆದುಕೊಳ್ಳುತ್ತಿದ್ದೇವೆ' ಎಂದು ಅವರು ಹೇಳಿದ್ದಾರೆ.

'ಉದ್ಯೋಗಗಳನ್ನು ಹೇಗೆ ಸೃಷ್ಟಿಸಬಹುದು ಎಂಬ ಪ್ರಶ್ನೆ ಸಹಜವಾಗಿಯೇ ಎದುರಾಗುತ್ತದೆ. ಇದಕ್ಕೆ ನಮ್ಮ ಜನರ ಸಾಮರ್ಥ್ಯವನ್ನು ಭಾಗಶಃ ಹೆಚ್ಚಿಸಬೇಕು ಮತ್ತು ಲಭ್ಯವಿರುವ ಉದ್ಯೋಗಗಳ ಸ್ವರೂಪವನ್ನೂ ಭಾಗಶಃ ಬದಲಿಸಬೇಕು. ಈ ನಿಟ್ಟಿನಲ್ಲಿ ನಾವು ಕೆಲಸ ಮಾಡಬೇಕಿದೆ' ಎಂದಿದ್ದಾರೆ.

ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲಿ ಶಿಷ್ಯವೇತನದ ಪ್ರಸ್ತಾಪ ಮಾಡಿರುವುದು ಯೋಗ್ಯವಾಗಿದೆ. ಇದನ್ನು ಬಹಳಷ್ಟು ಪರಿಣಾಮಕಾರಿಯಾಗಿ ಮಾಡಬೇಕಿದೆ. ಉತ್ತಮ ಕೆಲಸ ಮಾಡುವ ಸಾಮರ್ಥ್ಯ ಹೊಂದಲು ಇನ್ನೂ ಹೆಚ್ಚಿನ ವಿದ್ಯಾರ್ಥಿಗಳು ಬೇಕಾಗುತ್ತಾರೆ ಎಂದರು.

ಚಿಪ್‌ ತಯಾರಿಕೆಯಲ್ಲಿ ಭಾರತ ಶತಕೋಟಿ ಡಾಲರ್‌ಗಳನ್ನು ವ್ಯಯಿಸುತ್ತಿದೆ ಎಂದು ಟೀಕಿಸಿದ ಅವರು, ಇದಕ್ಕಾಗಿ ದೊಡ್ಡ ಪ್ರಮಾಣದಲ್ಲಿ ಸಬ್ಸಿಡಿ ನೀಡಬೇಕಾಗುತ್ತದೆ ಎಂದೂ ಬೇಸರ ವ್ಯಕ್ತಪಡಿಸಿದ್ದಾರೆ.

ದೇಶದಲ್ಲಿನ ಉದ್ಯೋಗ ಸಮಸ್ಯೆ ಕಳೆದ 10 ವರ್ಷಗಳಲ್ಲಿ ಸೃಷ್ಟಿಯಾಗಿದ್ದಲ್ಲ. ಇದು ಕಳೆದ ಕೆಲವು ದಶಕಗಳಿಂದ ಬೆಳೆಯುತ್ತ ಬಂದಿದೆ. ಇದನ್ನು ನಿರ್ಲಕ್ಷಿಸಬಾರದು ಎಂದು ಅವರು ಹೇಳಿದ್ದಾರೆ.

ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಅವರು, 'ಭಾರತೀಯ ನವೋದ್ಯಮಿಗಳು ಸಿಂಗಪುರಕ್ಕೆ ಹೋಗಲು ಬಯಸುತ್ತಿದ್ದಾರೆ. ಏಕೆಂದರೆ, ಅವರು ಅಲ್ಲಿ ಸುಲಭವಾಗಿ ಮಾರುಕಟ್ಟೆಗಳಿಗೆ ಪ್ರವೇಶ ಕಂಡುಕೊಳ್ಳುತ್ತಾರೆ. ಅವರು ವಾಸ್ತವದಲ್ಲಿ ಜಾಗತಿಕವಾಗಿ ತಮ್ಮ ಉದ್ಯಮವನ್ನು ಹೆಚ್ಚು ವಿಸ್ತರಿಸಲು ಉತ್ಸುಕರಾಗಿದ್ದಾರೆ' ಎಂದಿದ್ದಾರೆ.

'ಕ್ರಿಕೆಟಿಗ ವಿರಾಟ್‌ ಕೊಹ್ಲಿ ಅವರಂತಹದ್ದೇ ಮನಃಸ್ಥಿತಿ ಹೊಂದಿರುವ ಯುವ ಭಾರತ ನಮ್ಮ ಮುಂದಿದೆ ಎಂದು ನಾನು ಭಾವಿಸುತ್ತೇನೆ' ಎಂದ ಅವರು, 'ವಿಶ್ವದಲ್ಲಿ ನಾವು ಯಾರಿಗಿಂತಲೂ ಕಡಿಮೆಯಿಲ್ಲ' ಎಂದು ಹೇಳಿದ್ದಾರೆ.

'ದೇಶದಲ್ಲಿ ನಿರುದ್ಯೋಗ ಸಮಸ್ಯೆ ಏರುಗತಿಯಲ್ಲಿದೆ. ಕಾರ್ಮಿಕ ವರ್ಗದ ಭಾಗವಹಿಸುವಿಕೆ ಕಡಿಮೆಯಾಗಿದೆ. ಸರ್ಕಾರಿ ಉದ್ಯೋಗಗಳಿಗೆ ಬೃಹತ್‌ ಸಂಖ್ಯೆಯಲ್ಲಿ ಅರ್ಜಿಗಳು ಸಲ್ಲಿಕೆಯಾಗುತ್ತಿವೆ. ರೈಲ್ವೆಯ ಗುಮಾಸ್ತ ಹುದ್ದೆಗೆ ಪಿಎಚ್‌.ಡಿ ಪದವೀಧರರು ಅರ್ಜಿ ಸಲ್ಲಿಸುತ್ತಿದ್ದಾರೆ' ಎಂದು ಅವರು ವಿವರಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries