ಕಾಸರಗೋಡು: ಹಿರಿಯ ಪ್ರಾಥಮಿಕ ಶಾಲಾ ಕನ್ನಡ ಮಾಧ್ಯಮ ಶಿಕ್ಷಕರ ಹುದ್ದೆಗೆ ಶಿಕ್ಷಕರ ಆಯ್ಕೆಗಾಗಿ ಲೋಕಸೇವಾ ಆಯೋಗ ನಡೆಸಿದ ಪರೀಕ್ಷೆಯ ಪ್ರಶ್ನೆ ಪತ್ರಿಕೆಯಲ್ಲಿ ಮಲಯಾಳ ಪ್ರಶ್ನೆಗಳು, ಆಯ್ಕೆ ಉತ್ತರಗಳನ್ನು ನೀಡುವ ಮೂಲಕ ಕನ್ನಡ ಮಾಧ್ಯಮ ಅಭ್ಯರ್ಥಿಗಳನ್ನು ಗೊಂದಲಕ್ಕೆ ಸಿಲುಕಿಸಿರುವ ಕ್ರಮದ ವಿರುದ್ಧ ಕೇರಳ ಲೋಕಸೇವಾ ಆಯೋಗ(ಕೆಪಿಎಸ್‍ಸಿ) ಅಧ್ಯಕ್ಷರಿಗೆ ಮನವಿ ಸಲ್ಲಿಸಲು ಕನ್ನಡ ಮಾಧ್ಯಮ ಅಬ್ಯರ್ಥಿಗಳು ತೀರ್ಮಾನಿಸಿದ್ದಾರೆ.
ಯುಪಿಎಸ್‍ಎ ಕನ್ನಡ ವಿಭಾಗದಲ್ಲಿ ತೆರವಾಗಿದ್ದ ಹುದ್ದೆಗಳಿಗೆ ಶನಿವಾರ ಪರೀಕ್ಷೆ ನಡೆಸಲಾಗಿದ್ದು, ಪ್ರಶ್ನೆಗಳು ಹಾಗೂ ಆಯ್ಕೆ ಉತ್ತರಗಳು ಮಲಯಾಳೀಕರಣಗೊಮಡಿದ್ದ ಹಿನ್ನೆಲೆಯಲ್ಲಿ ಅಭ್ಯರ್ಥಿಗಳನ್ನು ಸಂದಿಗ್ಧತೆಗೆ ಸಿಲುಕಿಸಿತ್ತು. ಕೆಲವೊಂದು ಪ್ರಶ್ನೆಗಳು ಮಲಯಾಳ ಮಿಶ್ರಿತವಾಗಿರುವುದರಿಂದ ಇಂತಹ ಪ್ರಶ್ನೆಗಳನ್ನು ಅರ್ಥೈಸಿಕೊಳ್ಳಲಾಗದ ಸ್ಥಿತಿಯೂ ಅಭ್ಯರ್ಥಿಗಳಿಗೆ ಎದುರಾಗಿತ್ತು.
ಪಿಎಸ್‍ಸಿ ನಡೆಸುತ್ತಿರುವ ಬಹುತೇಕ ಪರೀಕ್ಷೆಗಳಲ್ಲಿ ಮಲಯಾಳ ನುಸುಳುವಿಕೆ ಸಾಮಾನ್ಯವಾಗಿದ್ದರೂ, ಶನಿವಾರ ನಡೆಸಲಾಗಿದ್ದ ಮನ:ಶಾಸ್ತ್ರ ವಿಭಾಗದ ಪ್ರಶ್ನೆ ಪತ್ರಿಕೆಯಲ್ಲಿ ಬಹುತೇಕ ಪ್ರಶ್ನೆಗಳು ಮಲಯಾಳ ಮಯವಾಗಿತ್ತು. ಕನ್ನಡ ಮಾಧ್ಯಮ ಅಭ್ಯರ್ಥಿಗಳ ಮೇಲೆ ನಡೆಸಿಕೊಮಡು ಬರುತ್ತಿರುವ ದಬಾರ್ಭಳಿಕೆ ಕ್ರಮವಾಗಿ ಮಲಯಾಳ ಮಿಶ್ರಿತ ಪ್ರಶ್ನೆ ಪತ್ರಿಕೆ ಒದಗಿಸಿರುವುದಾಗಿ ಅಭ್ಯರ್ಥಿಗಳು ದೂರಿದ್ದರು.
ಈಗಾಗಲೇ ನಡೆಸಿರುವ ಪರೀಕ್ಷೆಯನ್ನು ರದ್ದುಗೊಳಿಸಿ, ಸೂಕ್ತ ರೀತಿಯಲ್ಲಿ ಪ್ರಶ್ನೆಪತ್ರಿಕೆ ಸಿದ್ಧಪಡಿಸಿ ಪರೀಕ್ಷೆ ಮತ್ತೊಮ್ಮೆ ನಡೆಸುವಂತೆ ಉದ್ಯೋಗಾರ್ಥಿಗಳು ಆಗ್ರಹಿಸಿದ್ದಾರೆ.