ಕೊಚ್ಚಿ: ಮರಣದಂಡನೆಗೆ ಗುರಿಯಾಗಿ ಯೆಮೆನ್‍ನಲ್ಲಿ ಜೈಲಿನಲ್ಲಿರುವ ಕೇರಳೀಯ ಮಹಿಳೆ ನಿಮಿಷಪ್ರಿಯಾ ಅವರನ್ನು ಭೇಟಿ ಮಾಡಲು ತಾಯಿ ಪ್ರೇಮಕುಮಾರಿ ಶನಿವಾರ ಯೆಮೆನ್‍ಗೆ ತೆರಳಲಿದ್ದಾರೆ.
ಯೆಮನ್‍ನಲ್ಲಿ ವ್ಯಾಪಾರ ಹೊಂದಿರುವ ಸ್ಯಾಮ್ಯುಯೆಲ್ ಜೆರೋಮ್ ಕೂಡ ಅವರೊಂದಿಗೆ ಇರಲಿದ್ದಾರೆ. ಇದಕ್ಕೂ ಮುನ್ನ ಪ್ರೇಮಕುಮಾರಿ ಅವರು ಯೆಮೆನ್‍ಗೆ ಹೋಗಲು ಅನುಮತಿ ಕೋರಿ ದೆಹಲಿ ಹೈಕೋರ್ಟ್‍ನ ಮೊರೆ ಹೋಗಿದ್ದರು. ಅವರು ತಮ್ಮ ಸ್ವಂತ ಜವಾಬ್ದಾರಿಯ ಮೇಲೆ ಯೆಮನ್‍ಗೆ ಹೋಗಲು ಅನುಮತಿಯನ್ನು ಬಯಸಿದ್ದರು.
ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಯೆಮೆನ್‍ಗೆ ಹೋಗಲು ಸಹಾಯ ಮಾಡಲು ಸಾಧ್ಯವಿಲ್ಲ ಎಂದು ಹೇಳಿತ್ತು. ಏಕೆಂದರೆ ಯೆಮನ್‍ನಲ್ಲಿನ ಆಂತರಿಕ ಸಂಘರ್ಷದಿಂದಾಗಿ ಭಾರತ ಸರ್ಕಾರವು ರಾಜತಾಂತ್ರಿಕವಾಗಿ ಸಹಾಯ ಮಾಡುವ ಸ್ಥಿತಿಯಲ್ಲಿಲ್ಲ. ಬಳಿಕ ತಾನಾಗಿಯೇ ಹೋಗುತ್ತೇನೆ ಎಂದು ಪ್ರೇಮಕುಮಾರಿ ತಿಳಿಸಿದರು. ಇದನ್ನು ನ್ಯಾಯಾಲಯ ಒಪ್ಪಿಕೊಂಡಿದೆ.
ಪ್ರೇಮಕುಮಾರಿ ಯೆಮೆನ್‍ಗೆ ತೆರಳುವ ಪ್ರಕ್ರಿಯೆ ಮುಗಿದಿರುವ ಹಿನ್ನೆಲೆಯಲ್ಲಿ ಹತ್ಯೆಗೀಡಾದ ಯೆಮೆನ್ ಪ್ರಜೆಯ ಕುಟುಂಬದವರೊಂದಿಗೆ ಬ್ಲಡ್ ಮನಿ ಕುರಿತು ಚರ್ಚಿಸುವ ಉದ್ದೇಶದಿಂದ ಪ್ರೇಮಕುಮಾರಿ ತೆರಳುತ್ತಿದ್ದಾರೆ. ನಿಮಿಷಪ್ರಿಯಾ ಅವರ ತಾಯಿ ಪರ ವಕೀಲ ಸುಭಾಷ್ ಚಂದ್ರನ್ ಈ ವಿಷಯ ತಿಳಿಸಿದ್ದಾರೆ.