ಕಾಸರಗೋಡು: ಕೇರಳದ ರಾಜ್ಯಪಾಲರೂ ಕಣ್ಣೂರು ಯೂನಿವರ್ಸಿಟಿ ಛಾನ್ಸಲರೂ ಆಗಿರುವ ಆರಿಫ್ ಮಹಮ್ಮದ್ ಖಾನ್ ಅವರು ಯೂನಿವರ್ಸಿಟಿಯ ಸೆನೆಟ್ ಸದಸ್ಯರಾಗಿ ಕಾಸರಗೋಡು ಸರ್ಕಾರಿ ಕಾಲೇಜಿನ ಕನ್ನಡ ವಿಭಾಗದ ಸಹ ಪ್ರಾಧ್ಯಾಪಕ ಡಾ.ರತ್ನಾಕರ ಮಲ್ಲಮೂಲೆ ಅವರನ್ನು ನಾಮನಿರ್ದೇಶನಗೈದಿದ್ದಾರೆ. ಒಟ್ಟು ಹತ್ತೊಂಬತ್ತು ಮಂದಿಯನ್ನು ರಾಜ್ಯಪಾಲರು ನಾಮನಿರ್ದೇಶನ ಮಾಡಿದ್ದು, ಇದರಲ್ಲಿ ಭಾಷಾ ಅಲ್ಪಸಂಖ್ಯಾಕ ಕ್ಷೇತ್ರವನ್ನು ಡಾ.ರತ್ನಾಕರ ಮಲ್ಲಮೂಲೆ ಪ್ರತಿನಿಧಿಸಲಿದ್ದಾರೆ.
ಕಣ್ಣೂರು ವಿಶ್ವವಿದ್ಯಾನಿಲಯವು ರೂಪೀರಣವಾದ ಬಳಿಕ ಸೆನೆಟ್‍ನಲ್ಲಿ ಸ್ಥಾನ ಪಡೆಯುವ ಮೊದಲ ಕನ್ನಡಿಗನೆಂಬ ಹೆಗ್ಗಳಿಕೆಗೆ ಡಾ.ರತ್ನಾಕರ ಮಲ್ಲಮೂಲೆಯವರು ಪಾತ್ರರಾಗಿದ್ದಾರೆ. ಕಲ್ಲಿಕೋಟೆ ವಿಶ್ವವಿದ್ಯಾನಿಲಯದ ಸೆನೆಟ್‍ನಲ್ಲಿ ಕನ್ನಡಿಗರಿಗೆ ಸ್ಥಾನವಿತ್ತು. ಕಾಸರಗೋಡು ಲೋಕಸಭಾ ಕ್ಷೇತ್ರದಲ್ಲಿ ಮೂರು ಬಾರಿ ಗೆಲುವು ಸಾಧಿಸಿ ಸಂಸದರಾಗಿದ್ದ ರಾಜಕೀಯ ಧುರೀಣರೂ ಕನ್ನಡಿಗರೂ ಆಗಿದ್ದ ರಾಮಣ್ಣ ರೈ ಅವರು ಕಲ್ಲಿಕೋಟೆ ವಿಶ್ವವಿದ್ಯಾಲಯದ ಸೆನೆಟ್ ಸದಸ್ಯರಾಗಿ ಭಾಷಾ ಅಲ್ಪಸಂಖ್ಯಾಕರ ಪ್ರತಿನಿಧಿಯಾಗಿ ಕೆಲಸ ಮಾಡಿದ್ದರು.
1996 ರಲ್ಲಿ ಕಣ್ಣೂರು ವಿಶ್ವವಿದ್ಯಾಲಯವು ಹೊಸತಾಗಿ ಪ್ರಾರಂಭವಾಗಿತ್ತು. ಕಾಸರಗೋಡು, ಕಣ್ಣೂರು ಹಾಗೂ ವಯನಾಡು ಜಿಲ್ಲೆಯ ಉನ್ನತ ಶಿಕ್ಷಣದ ಅಭಿವೃದ್ಧಿಗೆ ಒತ್ತು ಕೊಡುವ ಉದ್ದೇಶದೊಂದಿಗೆ ಕಣ್ಣೂರು ವಿಶ್ವವಿದ್ಯಾನಿಲಯವು ಪ್ರಾರಂಭವಾಗಿತ್ತು.
ಆದರೆ ಕಣ್ಣೂರು ವಿಶ್ವವಿದ್ಯಾನಿಲಯ ರೂಪಿಕರಣವಾದ ಬಳಿಕ ಭಾಷಾ ಅಲ್ಪಸಂಖ್ಯಾಕ ಸೆನೆಟ್ ಸ್ಥಾನವನ್ನು ಭರ್ತಿಗೊಳಿಸದೆ ಕೈಬಿಡಲಾಗುತ್ತಿತ್ತು. ಇದರ ಬಗ್ಗೆ ಮಾಜಿ ಶಾಸಕರೂ ಕನ್ನಡ ಹೋರಾಟಗಾರರಾದ ಯುಪಿ ಕುಣಿಕುಳ್ಳಾಯರು, ಕನ್ನಡ ಹೋರಾಟಗಾರ ಪುರುಷೋತ್ತಮ ಮಾಸ್ತರ್ ಅವರು ನಿರಂತರ ಮನವಿಗಳನ್ನು ಸಲ್ಲಿಸಿ ನಿರಂತರ ಪ್ರಯತ್ನಿಸುತ್ತಿದ್ದರು. ಆದರೆ ಸುಧೀರ್ಘ 28 ವರುಷಗಳ ಬಳಿಕ ಮೊದಲಬಾರಿಗೆ ಕಣ್ಣೂರು ವಿಶ್ವವಿದ್ಯಾನಿಲಯವು ಕನ್ನಡಿಗರೊಬ್ಬನನ್ನು ಸೆನೆಟ್‍ಗೆ ಆಯ್ಕೆ ಮಾಡಿದೆ.