ಪಾಲಕ್ಕಾಡ್: ಚುನಾವಣಾ ರ‍್ಯಾಲಿಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನೀಡುತ್ತಿರುವ ಭರವಸೆಗಳನ್ನು ರಾಜ್ಯದ ಜನರು ನಂಬುವುದಿಲ್ಲ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಬುಧವಾರ ಹೇಳಿದರು.
ಕೇಂದ್ರದ ಬಿಜೆಪಿ ಸರ್ಕಾರವು ದೇಶದಲ್ಲಿ ಆರ್‌ಎಸ್‌ಎಸ್ ಕಾರ್ಯಸೂಚಿಯನ್ನು ಅನುಷ್ಠಾನಗೊಳಿಸುತ್ತಿದೆ ಎಂದು ಆರೋಪಿಸಿದ ಅವರು, ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯ (ಸಿಎಎ) ಕುರಿತು ಉಲ್ಲೇಖಿಸದ್ದಕ್ಕೆ ಹರಿಹಾಯ್ದರು.
ಪಾಲಕ್ಕಾಡ್‌ನ ಪಟ್ಟಾಂಬಿಯಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, 'ಜನರು ಒಮ್ಮೆ ಮೋಸ ಹೋಗಬಹುದು. ಆದರೆ, ಅವರಿಗೆ ಪದೇ ಪದೇ ಮೋಸ ಮಾಡಲು ಸಾಧ್ಯವಿಲ್ಲ' ಎಂದು ಹೇಳಿದರು.
'ಎರಡನೇ ಅವಧಿಯ ಯುಪಿಎ ಸರ್ಕಾರದ ಕುರಿತು ಜನರಲ್ಲಿ ಅತೃಪ್ತಿ ಇದ್ದಾಗ, ಹಲವಾರು ಭರವಸೆಗಳನ್ನು ನೀಡಿ ಮೋದಿ ಸರ್ಕಾರ 2014ರಲ್ಲಿ ಅಧಿಕಾರಕ್ಕೆ ಬಂದಿತ್ತು. ಆದರೆ ಅಧಿಕಾರಕ್ಕೆ ಬಂದ ಬಳಿಕ ಬಿಜೆಪಿ ಸರ್ಕಾರ ಕೂಡ ಕಾಂಗ್ರೆಸ್ ಸರ್ಕಾರದ ಆರ್ಥಿಕ ನೀತಿಗಳನ್ನೇ ಜಾರಿಗೊಳಿಸಿದೆ' ಎಂದರು.
ಭಾರತವನ್ನು ಧಾರ್ಮಿಕ ರಾಷ್ಟ್ರವನ್ನಾಗಿಸಲು ಬಿಜೆಪಿಯು ಯತ್ನಿಸುತ್ತಿದೆ ಎಂದೂ ಅವರು ಆರೋಪಿಸಿದರು.
'ಮೋದಿ, ವಿಜಯನ್ ನಡುವೆ ವ್ಯತಾಸವಿಲ್ಲ'
ಕಣ್ಣೂರು: ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಇಬ್ಬರೂ ತಾವು ಒಂದೇ ರೀತಿಯವರಲ್ಲ ಎಂಬುದನ್ನು ಮನವರಿಕೆ ಮಾಡಲು ಪ್ರಯತ್ನಿಸುತ್ತಿದ್ದಾರೆ. ಆದರೆ, ಇವರಿಬ್ಬರ ನಡುವೆ ಯಾವುದೇ ವ್ಯತ್ಯಾಸವಿಲ್ಲ ಎಂಬುದು ಕೇರಳದ ಜನರಿಗೆ ಗೊತ್ತಿದೆ ಎಂದು ಕೇರಳ ವಿಧಾನಸಭೆಯ ವಿಪಕ್ಷ ನಾಯಕ ವಿ.ಡಿ. ಸತೀಶನ್ ಆರೋಪಿಸಿದರು.
ಕಳೆದ ಒಂದು ತಿಂಗಳಿಂದ ವಿಜಯನ್ ಅವರು ಕಾಂಗ್ರೆಸ್ ಪಕ್ಷವನ್ನು ಮತ್ತು ರಾಹುಲ್ ಗಾಂಧಿ ಅವರನ್ನು ಟೀಕಿಸುತ್ತಿದ್ದಾರೆ. ಆದರೆ ಮೋದಿ ಅವರ ವಿರುದ್ಧ ಒಂದು ಶಬ್ದವನ್ನೂ ಆಡಿಲ್ಲ ಎಂದರು.
ಕಾಂಗ್ರೆಸ್ ಮತ್ತು ರಾಹುಲ್ ವಿರುದ್ಧ ಆರೋಪಗಳನ್ನು ಮಾಡುತ್ತಾ, ವಿಜಯನ್ ಅವರು ಮೋದಿ ಅವರನ್ನು ಖುಷಿಪಡಿಸಲು ಯತ್ನಿಸುತ್ತಿದ್ದಾರೆ ಎಂದೂ ಹೇಳಿದರು.