ನವದೆಹಲಿ: ಪತಂಜಲಿ ಆಯುರ್ವೇದ ಕಂಪನಿಯ ದಾರಿ ತಪ್ಪಿಸುವ ಜಾಹೀರಾತು ಪ್ರಕರಣಕ್ಕೆ ಸಂಬಂಧಿಸಿದಂತೆ ಯೋಗ ಗುರು ಬಾಬಾ ರಾಮದೇವ್ ಮತ್ತು ಅವರ ಆಪ್ತ ಹಾಗೂ ಪತಂಜಲಿ ಕಂಪನಿಯ ಮ್ಯಾನೇಜಿಂಗ್ ಡೈರೆಕ್ಟರ್ ಆಚಾರ್ಯ ಬಾಲಕೃಷ್ಣರ 'ಬೇಷರತ್ ಕ್ಷಮೆ'ಯನ್ನು ಸುಪ್ರೀಂಕೊರ್ಟ್ ಬುಧವಾರ ತಿರಸ್ಕರಿಸಿತು.
ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಮತ್ತು ಅಹ್ಸಾನುದ್ದೀನ್ ಅಮಾನುಲ್ಲಾ ಅವರ ಪೀಠವು ಪತಂಜಲಿ ಕಂಪನಿಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತು. ನಿಮ್ಮ ಕ್ರಮಗಳು ಉದ್ದೇಶಪೂರ್ವಕ ಮತ್ತು ಪುನರಾವರ್ತಿತ ಉಲ್ಲಂಘನೆಯಾಗಿದೆ ಎಂದಿತು. ಇಷ್ಟು ದಿನ ಪತಂಜಲಿ ವಿರುದ್ಧ ಕ್ರಮಕೈಗೊಳ್ಳದ ಉತ್ತರಾಖಂಡ್ ಪರವಾನಗಿ ಪ್ರಾಧಿಕಾರದ ವಿರುದ್ಧವೂ ನ್ಯಾಯಾಲಯ ಆಕ್ರೋಶ ವ್ಯಕ್ತಪಡಿಸಿತು ಮತ್ತು ಈ ವಿಷಯದಲ್ಲಿ ಕೇಂದ್ರದ ಉತ್ತರದಿಂದ ನಾವು ತೃಪ್ತರಾಗಿಲ್ಲ ಎಂದಿತು.
ಪತಂಜಲಿ ಸಂಸ್ಥಾಪಕರ ಪರ ವಾದ ಮಂಡಿಸಿದ ಹಿರಿಯ ವಕೀಲ ಮುಕುಲ್ ರೋಹಟಗಿ, ಜನರು ಜೀವನದಲ್ಲಿ ತಪ್ಪುಗಳನ್ನು ಮಾಡುವುದು ಸಹಜ ಎಂದರು. ಆದರೆ, ಅಂತಹ ತಪ್ಪುಗಳಿಂದ ಬೇರೆಯವರು ತೊಂದರೆ ಅನುಭವಿಸಬೇಕಾಗುತ್ತದೆ ಸುಪ್ರೀಂ ಕೋರ್ಟ್ ವಕೀಲರನ್ನು ಛೀಮಾರಿ ಹಾಕಿತು. ನಾವೇನು ಕುರುಡರಲ್ಲ ಮತ್ತು ಈ ಪ್ರಕರಣದಲ್ಲಿ ಉದಾರವಾಗಿರಲು ನಾವು ಬಯಸುವುದಿಲ್ಲ ಎಂದು ಕೋರ್ಟ್ ಕಿಡಿಕಾರಿತು.
ಇಂದಿನ ವಿಚಾರಣೆಯ ಸಂದರ್ಭದಲ್ಲಿ ವಕೀಲ ರೋಹಟಗಿ ಅವರು ಪತಂಜಲಿ ಮತ್ತು ಅದರ ಎಂಡಿ ಆಚಾರ್ಯ ಬಾಲಕೃಷ್ಣ ಅವರು ಸಲ್ಲಿಸಿದ ಎರಡು ಅಫಿಡವಿಟ್‌ಗಳನ್ನು ಮತ್ತು ಬಾಬಾ ರಾಮ್‌ದೇವ್ ಅವರ ಇನ್ನೊಂದು ಅಫಿಡವಿಟ್‌ಗಳನ್ನು ಓದಿದರು. ಆದರೆ, ಅವರ ಕ್ಷಮಾಪಣೆಯು ಕೇವಲ ಕಾಗದಕ್ಕೆ ಮಾತ್ರ ಸೀಮಿತವಾಗಿದೆ. ನಾವಿದನ್ನು ಒಪ್ಪಿಕೊಳ್ಳಲು ನಿರಾಕರಿಸುತ್ತೇವೆ. ಇದು ಉದ್ದೇಶಪೂರ್ವಕ ಉಲ್ಲಂಘನೆ ಎಂದು ನಾವು ಪರಿಗಣಿಸುತ್ತೇವೆ ಎಂದು ಕೋರ್ಟ್ ಹೇಳಿತು. ಮುಂದಿನ ಕ್ರಮಕ್ಕೆ ಸಿದ್ಧರಾಗಿರಿ ಎಂದು ಇದೇ ಸಂದರ್ಭದಲ್ಲಿ ಎಚ್ಚರಿಕೆ ನೀಡಿತು.
ಏಪ್ರಿಲ್ 2ರಂದು ಯೋಗ ಗುರು ಬಾಬಾ ರಾಮದೇವ್ ಮತ್ತು ಅವರ ಆಪ್ತ ಹಾಗೂ ಪತಂಜಲಿ ಕಂಪನಿಯ ಮ್ಯಾನೇಜಿಂಗ್ ಡೈರೆಕ್ಟರ್ ಆಚಾರ್ಯ ಬಾಲಕೃಷ್ಣ ಅವರು ಇಂದು ಸುಪ್ರೀಂಕೋರ್ಟ್ ಮುಂದೆ ಹಾಜರಾದರು. ಈ ವೇಳೆ ತನ್ನ ಆದೇಶಗಳನ್ನು ಪಾಲಿಸದೇ ಉಲ್ಲಂಘಿಸುವ ಮೂಲಕ ನ್ಯಾಯಾಂಗ ನಿಂದನೆ ಮಾಡಿದ ರಾಮದೇವ್ ಮತ್ತು ಬಾಲಕೃಷ್ಣ ಅವರನ್ನು ತರಾಟೆಗೆ ತೆಗೆದುಕೊಂಡ ದೇಶದ ಉನ್ನತ ನ್ಯಾಯಾಲಯ ಕ್ರಮ ಎದರಿಸಲು ರೆಡೆಯಾಗಿರಿ ಎಂದು ಹೇಳಿತು.
ಮಾರ್ಚ್ 21ರಂದು ಪತಂಜಲಿ ಕಂಪನಿಯ ಮ್ಯಾನೇಜಿಂಗ್ ಡೈರೆಕ್ಟರ್ ಆಚಾರ್ಯ ಬಾಲಕೃಷ್ಣ, ಸುಪ್ರೀಂಕೋರ್ಟ್ಗೆ ಅಫಿಡೆವಿಟ್ ಸಲ್ಲಿಸಿ, ತಮ್ಮ ತಪ್ಪು ಜಾಹಿರಾತುಗಳ ಬಗ್ಗೆ ಪಶ್ಚಾತಾಪ ವ್ಯಕ್ತಪಡಿಸಿ, ಕ್ಷಮೆಯಾಚಿಸಿದರು. ಆಯುರ್ವೇದದ ಮೂಲಕ ಜೀವನಶೈಲಿಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳಿಗೆ ಸೂಕ್ತ ಪರಿಹಾರಗಳನ್ನು ಒದಗಿಸುವ ಮೂಲಕ ದೇಶದ ಆರೋಗ್ಯ ಮೂಲಸೌಕರ್ಯದ ಮೇಲಿನ ಹೊರೆಯನ್ನು ಕಡಿಮೆ ಮಾಡುವುದು ನಮ್ಮ ಪತಂಜಲಿ ಕಂಪನಿಯ ಅನ್ವೇಷಣೆಯಾಗಿದೆ ಎಂದು ಸ್ಪಷ್ಟಪಡಿಸಿದ ಬಾಲಕೃಷ್ಣ, ಭವಿಷ್ಯದಲ್ಲಿ ಇಂತಹ ತಪ್ಪು ಜಾಹೀರಾತುಗಳನ್ನು ಪ್ರಕಟಿಸುವುದಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದರು.
ತಪ್ಪುದಾರಿಗೆಳೆಯುವ ಜಾಹೀರಾತುಗಳ ಕುರಿತು ಸುಪ್ರೀಂ ಕೋರ್ಟ್ ನೀಡಿದ ಶೋಕಾಸ್ ನೋಟಿಸ್‌ಗೆ ಪತಂಜಲಿ ಕಂಪನಿಯು ಪ್ರತಿಕ್ರಿಯೆ ನೀಡಿದೆ. ಎರಡು ವಾರಗಳ ಅವಧಿಯಲ್ಲಿ ಖುದ್ದು ಹಾಜರಾಗುವಂತೆ ಯೋಗ ಗುರು ಬಾಬಾ ರಾಮ್‌ದೇವ್ ಮತ್ತು ಆಚಾರ್ಯ ಬಾಲಕೃಷ್ಣ ಅವರಿಗೆ ನ್ಯಾಯಾಲಯ ಸೂಚಿಸಿತ್ತು. ನ್ಯಾಯಾಲಯದ ಸೂಚನೆಗಳನ್ನು ಉಲ್ಲಂಘಿಸಿದ ನಿಮ್ಮ ಮೇಲೆ ನ್ಯಾಯಾಂಗ ನಿಂದನೆ ಪ್ರಕರಣ ಏಕೆ ದಾಖಲಿಸಬಾರದು ಎಂದು ಕೋರ್ಟ್ ಕೇಳಿದ್ದಕ್ಕೆ ಪತಂಜಲಿ ಕಂಪನಿ ಬೇಷರತ್ ಕ್ಷಮೆಯಾಚಿಸಿತು. ಇದೀಗ ನ್ಯಾಯಾಲಯದ ಮುಂದೆ ಹಾಜರಾಗಿ ಕ್ಷಮೆಯಾಚಿಸಿದ್ದಾರೆ.
ಇದಕ್ಕೂ ಮುನ್ನ ತಪ್ಪು ದಾರಿಗೆಳೆಯುವ ಜಾಹೀರಾತುಗಳ ವಿರುದ್ಧ ಹೊರಡಿಸಿರುವ ಆದೇಶವನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಯೋಗ ಗುರು ಬಾಬಾ ರಾಮದೇವ್ ಒಡೆತನದ ಪತಂಜಲಿ ಆಯುರ್ವೇದ ಕಂಪನಿ ಮತ್ತು ಅದರ ವ್ಯವಸ್ಥಾಪಕ ನಿರ್ದೇಶಕ ಆಚಾರ್ಯ ಬಾಲಕೃಷ್ಣಗೆ ಸುಪ್ರೀಂಕೋರ್ಟ್, ಕಳೆದ ಫೆ.27ರಂದು ನ್ಯಾಯಾಂಗ ನಿಂದನೆ ನೋಟಿಸ್ ಜಾರಿ ಮಾಡಿತು. ಮುಂದಿನ ಆದೇಶದವರೆಗೆ ಪಂತಜಲಿ ತನ್ನ ಔಷಧೀಯ ಉತ್ಪನ್ನಗಳ ಯಾವುದೇ ಜಾಹೀರಾತು ನೀಡದಂತೆ ನ್ಯಾಯಾಲಯ ನಿರ್ಬಂಧಿಸಿತ್ತು.
ತನ್ನ ಜಾಹೀರಾತುಗಳಲ್ಲಿ ಅಲೋಪತಿ ವಿರುದ್ಧ ಪತಂಜಲಿ ಕಂಪನಿ ತಪ್ಪು ಮಾಹಿತಿ ಪ್ರಚಾರ ಮಾಡುತ್ತಿದೆ ಎಂದು ಆರೋಪಿಸಿ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಸುಪ್ರೀಂ ಕೋರ್ಟ್ಗೆ ಅರ್ಜಿ ದಾಖಲಿಸಿತ್ತು. ಈ ಸಂಬಂಧ ವಿಚಾರಣೆ ನಡೆಸಿದ್ದ ನ್ಯಾಯಾಲಯ ಜಾಹೀರಾತುಗಳ ವಿರುದ್ಧ ಆದೇಶ ಹೊರಡಿಸಿತ್ತು. ಆದಾಗ್ಯೂ ಆದೇಶವನ್ನು ಪತಂಜಲಿ ಉಲ್ಲಂಘಿಸಿದ್ದು, ಇದರಿಂದ ಆಕ್ರೋಶಗೊಂಡ ನ್ಯಾಯಾಲಯ ನ್ಯಾಯಾಂಗ ನಿಂದನೆ ನೋಟಿಸ್ ನೀಡಿ, ಉತ್ತರಿಸುವಂತೆ ತಾಕೀತು ಮಾಡಿತ್ತು. ಅಲ್ಲದೆ, ದಾರಿತಪ್ಪಿಸುವ ಜಾಹೀರಾತುಗಳನ್ನು ಸಹಿಸಲಾಗುವುದಿಲ್ಲ ಎಂದು ನ್ಯಾಯಮೂರ್ತಿ ಅಮಾನುಲ್ಲಾ ಅವರು ಖಡಕ್ ಎಚ್ಚರಿಕೆ ನೀಡಿದ್ದರು.
ಕೋವಿಡ್-19 ವ್ಯಾಕ್ಸಿನೇಷನ್ ವಿರುದ್ಧ ಪತಂಜಲಿ ಅಭಿಯಾನ ನಡೆಸಿದೆ ಎಂದು ಆರೋಪಿಸಿ ಐಎಂಎ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಕಳೆದ ನವೆಂಬರ್ನಲ್ಲಿ ನಡೆದಿತ್ತು. ನ್ಯಾಯಮೂರ್ತಿಗಳಾದ ಅಹ್ಸಾನುದ್ದೀನ್ ಅಮಾನುಲ್ಲಾ ಮತ್ತು ಪ್ರಶಾಂತ್ ಕುಮಾರ್ ಮಿಶ್ರಾ ಅವರಿದ್ದ ಪೀಠವು ಸಮಾಲೋಚನೆ ನಡೆಸಿ, ದಾರಿತಪ್ಪಿಸುವ ಜಾಹೀರಾತುಗಳನ್ನು ಎದುರಿಸಲು ಕೆಲವು ಶಿಫಾರಸುಗಳೊಂದಿಗೆ ಬರುವಂತೆ ಕೇಂದ್ರ ಸರ್ಕಾರಕ್ಕೆ ಹೇಳಿತ್ತು.
ಯೋಗದ ಸಹಾಯದಿಂದ ಮಧುಮೇಹ ಮತ್ತು ಅಸ್ತಮಾವನ್ನು ಸಂಪೂರ್ಣವಾಗಿ ಗುಣಪಡಿಸುವುದಾಗಿ ಪತಂಜಲಿಯು ಎಂದು ಹೇಳಿಕೊಂಡಿದೆ. ಅಲ್ಲದೆ, ತನ್ನ ಕಂಪನಿಯ ಉತ್ಪನ್ನಗಳನ್ನು ಬಳಸಿದರೆ ನಿರ್ದಿಷ್ಟ ಕಾಯಿಲೆ ಗುಣವಾಗುತ್ತದೆ ಎಂದು ಸಹ ಪತಂಜಲಿ ಹೇಳಿಕೊಂಡಿತ್ತು. ಅಲ್ಲದೆ, ಆಲೋಪತಿ ಚಿಕಿತ್ಸಾ ವಿಧಾನದ ಬಗ್ಗೆ ತಪ್ಪು ಮಾಹಿತಿ ಹರಡಿದ್ದರಿಂದ ಭಾರತೀಯ ವೈದ್ಯಕೀಯ ಸಂಘ ಕೋರ್ಟ್ ಮೆಟ್ಟಿಲೇರಿತ್ತು.