ಕಾಸರಗೋಡು: ಲೋಕಸಭಾ ಚುನಾವಣೆಯ ಮತದಾನ ಕರ್ತವ್ಯಕ್ಕೆ ನಿಯೋಜಿಸಲಾದ ಇತರ ಜಿಲ್ಲೆಗಳ ಅಧಿಕಾರಿಗಳಿಗೆ ಅಂಚೆ ಮತಕ್ಕಾಗಿ ಅರ್ಜಿ ಸಲ್ಲಿಸಲು ಎಪ್ರಿಲ್ 3 ಮತ್ತು 4 ರಂದು ಮತಗಟ್ಟೆ ಅಧಿಕಾರಿಗಳಿಗಾಗಿ ನಡೆಸುವ ತರಬೇತಿ ಕಾರ್ಯಕ್ರಮದಲ್ಲಿ ಅವಕಾಶ ಕಲ್ಪಿಸಲಾಗಿದೆ.
ತ್ರಿಕ್ಕರಿಪುರ ಮತ್ತು ಕಾಞಂಗಾಡು ವಿಧಾನಸಭಾ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳಿಗೆ ಕಾಞಂಗಾಡ್ ದುರ್ಗಾ ಹೈಯರ್ ಸೆಕೆಂಡರಿ ಶಾಲೆಯಲ್ಲಿಯೂ, ಉದುಮ ಕಾಸರಗೋಡು ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳಿಗೆ ಕಾಸರಗೋಡು ಸರ್ಕಾರಿ ಕಾಲೇಜಿನಲ್ಲಿಯೂ ಮಂಜೇಶ್ವರ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವ ಅಧಿಕಾರಿಗಳಿಗೆ ಕುಂಬಳೆ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಗಳಲ್ಲಿರುವ ತರಬೇತಿ ಕೇಂದ್ರಗಳಿಗೆ ತರಬೇತಿಗಾಗಿ ಹಾಜರಾಗುವಂತೆ ಸೂಚಿಸಿರುವ ಮತಗಟ್ಟೆ ಅಧಿಕಾರಿ, ಪ್ರಥಮ ಮತಗಟ್ಟೆ ಅಧಿಕಾರಿ
ಹಾಗೂ ಮತಗಟ್ಟೆ ಕರ್ತವ್ಯಕ್ಕಾಗಿ ನೇಮಕಗೊಳಿಸಿರುವ ಇತರ ಅಧಿಕಾರಿಗಳು ಚುನಾವಣಾ ಗುರುತಿನ ಚೀಟಿ ಮತ್ತು ಕರ್ತವ್ಯದ ಆದೇಶ ಪತ್ರದ ಪ್ರತಿಯೊಂದಿಗೆ ನಮೂನೆ 12ರಲ್ಲಿ ಅಂಚೆ ಮತಪತ್ರಕ್ಕಾಗಿ ತರಬೇತಿ ಕೇಂದ್ರಗಳಲ್ಲಿ ಸಿದ್ಧಪಡಿಸಿದ 'ಸುಗಮ' ಕೇಂದ್ರದಲ್ಲಿ ಅರ್ಜಿ ಸಲ್ಲಿಸಬಹುದು.
ಅರ್ಜಿ ನಮೂನೆ ಫಾರ್ಮ್ 12 ನ್ನು ತರಬೇತಿ ಕೇಂದ್ರದಲ್ಲಿ ವಿತರಿಸಲಾಗುತ್ತದೆ. ಸಂಶಯ ನಿವಾರಣೆಗಾಗಿ ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ಜಿಲ್ಲಾ ಚುನಾವಣಾ ನಿಯಂತ್ರಣ ಕೊಠಡಿ ಟೋಲ್‍ಫ್ರೀ ಸಂಖ್ಯೆ 1950 ನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.