ಶ್ರೀನಗರ: ಉಕ್ರೇನ್ ವಿರುದ್ಧದ ಯುದ್ಧದಲ್ಲಿ ಹೋರಾಡಲು ರಷ್ಯಾ ಸೇನೆ ನೇಮಕ ಮಾಡಿಕೊಂಡಿರುವ ಕಾಶ್ಮೀರ ಮೂಲದ ವ್ಯಕ್ತಿ ಆಜಾದ್ ಯೂಸುಫ್ ಕುಮಾರ್ (31) ಅವರ ಕುಟುಂಬ ಸದಸ್ಯರ ಹೇಳಿಕೆಗಳನ್ನು ಸಿಬಿಐ ದಾಖಲಿಸಿಕೊಂಡಿದೆ. ಪುಲ್ವಾಮಾ ಮೂಲದ ಆಜಾದ್ ಎಂಜಿನಿಯರಿಂಗ್ ಪದವೀಧರರು.

ಈ ಕುರಿತು ಆಜಾದ್ ಸಹೋದರ ಸಾಜದ್ ಅಹಮದ್ ಕುಮಾರ್ ಅವರು ಸುದ್ದಿಸಂಸ್ಥೆಗೆ ಮಾಹಿತಿ ನೀಡಿದ್ದಾರೆ. ತಮ್ಮ ಸಹೋದರನ ಕುರಿತು ಸಿಬಿಐ ಅಧಿಕಾರಿಗಳು ಪ್ರಶ್ನೆ ಕೇಳಿದರು. ತನಿಖೆ ಸಲುವಾಗಿ ದೆಹಲಿಯ ಸಿಬಿಐ ಕಚೇರಿಗೆ ಹಾಜರಾಗುವಂತೆಯೂ ಹೇಳಿದರು. ಆರ್ಥಿಕ ಮುಗ್ಗಟ್ಟಿನ ಕಾರಣ ದೆಹಲಿಗೆ ಬರಲು ಸಾಧ್ಯವಿಲ್ಲ ಎಂದು ಹೇಳಿದ್ದಾಗಿ ಅವರು ಹೇಳಿದರು.
ಸಂಕಷ್ಟದಲ್ಲಿರುವ ಇನ್ನೂ 12 ಯುವಕರ ಕುಟುಂಬಗಳನ್ನೂ ಸಿಬಿಐ ಸಂಪರ್ಕಿಸಿದೆ ಎಂದು ಅವರು ಹೇಳಿದ್ದಾರೆ.
'ಯುಟ್ಯೂಬರ್ ಫೈಸಲ್ ಖಾನ್ ಎಂಬುವವರ ಮಾತು ನಂಬಿ ಆಜಾದ್ ಕಳೆದ ವರ್ಷ ಡಿಸೆಂಬರ್ 14ರಂದು ದುಬೈಗೆ ತೆರಳಿದ. ಆದರೆ ರಷ್ಯಾ ಸೇನೆಗೆ ಆತನನ್ನು ನೇಮಕ ಮಾಡಲಾಗಿದೆ. ಈಗ ಅವನು ಉಕ್ರೇನ್ ಗಡಿಯಲ್ಲಿರುವುದಾಗಿ ಮಾಹಿತಿ ನೀಡಿದ್ದಾನೆ. ಕೇಂದ್ರ ಸರ್ಕಾರ ಆತನ ರಕ್ಷಣೆ ಮಾಡಬೇಕು' ಎಂದು ಅವರು ಹೇಳಿದರು.
ಭಾರತೀಯ ಯುವಕರನ್ನು ಮೋಸದಿಂದ ರಷ್ಯಾ ಸೇನೆಗೆ ನೇಮಕ ಮಾಡುತ್ತಿದ್ದ ಮಾನವ ಕಳ್ಳಸಾಗಣೆ ಜಾಲವನ್ನು ಸಿಬಿಐ ಮಾರ್ಚ್ 8ರಂದು ಬಯಲಿಗೆಳೆದಿತ್ತು.