HEALTH TIPS

ಭಾರತದಲ್ಲಿ ಸಕ್ಕರೆ ಸಹಿತ ಶಿಶು ಆಹಾರ, ಬ್ರಿಟನ್, ಯುರೋಪ್ ನಲ್ಲಿ ಸಕ್ಕರೆ ಇಲ್ಲದ ಶಿಶು ಆಹಾರ!

 ನವದೆಹಲಿ:ಜಾಗತಿಕ ದೈತ್ಯ ಸಂಸ್ಥೆ ನೆಸ್ಲೆ ಭಾರತ ಸೇರಿದಂತೆ ಕಡಿಮೆ ಶ್ರೀಮಂತ ದೇಶಗಳಲ್ಲಿ ಮಾರಾಟಗೊಳ್ಳುವ ತನ್ನ ಶಿಶು ಆಹಾರದಲ್ಲಿ ಸಕ್ಕರೆಯನ್ನು ಸೇರಿಸುತ್ತದೆ,ಆದರೆ ಯುರೋಪ ಅಥವಾ ಬ್ರಿಟನ್‌ಗಳಂತಹ ಪ್ರಮುಖ ಮಾರುಕಟ್ಟೆಗಳಲ್ಲಿ ಅದರ ಇಂತಹ ಉತ್ಪನ್ನಗಳು ಸಕ್ಕರೆ ಮುಕ್ತವಾಗಿರುತ್ತವೆ ಎಂದು ಸ್ವಿಸ್ ತನಿಖಾ ಸಂಸ್ಥೆ ಪಬ್ಲಿಕ್ ಐ ಮತ್ತು ಇಂಟರ್‌ನ್ಯಾಷನಲ್ ಬೇಬಿ ಫುಡ್ ಆಯಕ್ಶನ್ ನೆಟ್‌ವರ್ಕ್ (ಐಬಿಎಫ್‌ಎಎನ್) ನಡೆಸಿದ ಜಂಟಿ ಅಧ್ಯಯನವು ಬಹಿರಂಗಗೊಳಿಸಿದೆ.

ಈ ಸಂಸ್ಥೆಗಳು ಏಶ್ಯಾ,ಆಫ್ರಿಕಾ ಮತ್ತು ಲ್ಯಾಟಿನ್ ಅಮೆರಿಕದಲ್ಲಿ ಮಾರಾಟಗೊಳ್ಳುತ್ತಿರುವ ನೆಸ್ಲೆಯ ಶಿಶು ಆಹಾರಗಳ ಸ್ಯಾಂಪಲ್‌ಗಳನ್ನು ಬೆಲ್ಜಿಯಮ್‌ನ ಪ್ರಯೋಗಾಲಯದಲ್ಲಿ ಪರೀಕ್ಷೆಗೊಳಪಡಿಸಿದ್ದವು.

ಭಾರತದಲ್ಲಿ ನೆಸ್ಲೆಯ ಎಲ್ಲ ವಿಧಗಳ ಸೆರಿಲ್ಯಾಕ್ ಶಿಶು ಆಹಾರಗಳು ಪ್ರತಿ ಸರ್ವ್‌ನಲ್ಲಿ ಸರಾಸರಿ ಸುಮಾರು ಮೂರು ಗ್ರಾಂ ಸಕ್ಕರೆಯನ್ನು ಒಳಗೊಂಡಿವೆ ಎಂದು ಪಬ್ಲಿಕ್ ಐ ಬುಧವಾರ ಬಿಡುಗಡೆಗೊಳಿಸಿದ ಅಧ್ಯಯನ ವರದಿಯು ತಿಳಿಸಿದೆ. ಜರ್ಮನಿ,ಫ್ರಾನ್ಸ್ ಮತ್ತು ಬ್ರಿಟನ್‌ಗಳ ಆರು ತಿಂಗಳು ಪ್ರಾಯದ ಶಿಶುಗಳಿಗಾಗಿ ನೆಸ್ಲೆ ಮಾರಾಟ ಮಾಡುವ ಶಿಶು ಆಹಾರಗಳು ಸಕ್ಕರೆ ಮುಕ್ತವಾಗಿರುತ್ತವೆ. ಇದೇ ವೇಳೆ ಇಥಿಯೋಪಿಯಾ ಮತ್ತು ಥೈಲ್ಯಾಂಡ್‌ಗಳಲ್ಲಿ ಮಾರಾಟಗೊಳ್ಳುವ ನೆಸ್ಲೆಯ ಇಂತಹುದೇ ಉತ್ಪನ್ನಗಳು ಅನುಕ್ರಮವಾಗಿ ಪ್ರತಿ ಸರ್ವ್‌ಗೆ ಐದು ಮತ್ತು ಆರು ಗ್ರಾಂ ಸಕ್ಕರೆಯನ್ನು ಒಳಗೊಂಡಿವೆ ಎಂದು ವರದಿಯು ಬೆಟ್ಟು ಮಾಡಿದೆ.

ವರದಿಗೆ ಪ್ರತಿಕ್ರಿಯಿಸಿದ ವಿಶ್ವ ಆರೋಗ್ಯ ಸಂಸ್ಥೆಯ ವಿಜ್ಞಾನಿ ನಿಗೆಲ್ ರಾಲಿನ್ಸ್ ಅವರು,ಇಲ್ಲಿ ಎರಡು ಮಾನದಂಡಗಳಿದ್ದು, ಅವುಗಳನ್ನು ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ. ಸ್ವಿಟ್ಝರ್‌ಲ್ಯಾಂಡ್‌ನಲ್ಲಿ ನೆಸ್ಲೆ ಈ ಉತ್ಪನ್ನಗಳಿಗೆ ಸಕ್ಕರೆಯನ್ನು ಸೇರಿಸುವುದಿಲ್ಲ, ಆದರೆ ಬಡ ರಾಷ್ಟ್ರಗಳಲ್ಲಿ ಮಾರಾಟ ಮಾಡುವ ತನ್ನ ಉತ್ಪನ್ನಗಳಲ್ಲಿ ಸಕ್ಕರೆಯನ್ನು ಸೇರಿಸುತ್ತದೆ. ಇದು ಸಾರ್ವಜನಿಕ ಆರೋಗ್ಯ ಮತ್ತು ನೈತಿಕತೆಗೆ ಸವಾಲುಗಳನ್ನು ಒಡ್ಡುತ್ತದೆ ಎಂದು ಹೇಳಿದರು.

ಜೀವನದ ಆರಂಭದಲ್ಲಿಯೇ ಸಕ್ಕರೆ ಸೇವನೆಯು ಮುಂದೆ ಸಿಹಿಕಾರಕಗಳ ಗೀಳನ್ನುಂಟು ಮಾಡುತ್ತದೆ ಮತ್ತು ಇದು ಬೊಜ್ಜು ಹಾಗೂ ವಿವಿಧ ಕಾಯಿಲೆಗಳಿಗೆ ಆಹ್ವಾನ ನೀಡುತ್ತದೆ ಎಂದು ಡಬ್ಯುಎಚ್‌ಒದ ಎಚ್ಚರಿಕೆಯನ್ನು ವರದಿಯು ಉಲ್ಲೇಖಿಸಿದೆ. 2022ರಲ್ಲಿ ಡಬ್ಯುಎಚ್‌ಒ ಶಿಶು ಆಹಾರಗಳಲ್ಲಿ ಪೂರಕ ಸಕ್ಕರೆ ಮತ್ತು ಸಿಹಿಕಾರಕಗಳ ಸೇರ್ಪಡೆಯನ್ನು ನಿಷೇಧಿಸಬೇಕೆಂದು ಪ್ರತಿಪಾದಿಸಿತ್ತು.

ಕುತೂಹಲಕಾರಿಯಾಗಿ ನೆಸ್ಲೆ ತನ್ನ ವೆಬ್‌ಸೈಟ್‌ನಲ್ಲಿ ಶಿಶುಗಳಿಗೆ ಪೌಷ್ಟಿಕಾಂಶದ ಕುರಿತು ಸಲಹೆಗಳನ್ನು ನೀಡಿದೆ. ಶಿಶುಗಳಿಗೆ ಆಹಾರ ತಯಾರಿಸುವಾಗ ಸಕ್ಕರೆ ಬೆರೆಸದಂತೆ ಅಥವಾ ಸಕ್ಕರೆ ಪಾನೀಯಗಳನ್ನು ನೀಡದಂತೆ ಅದು ಶಿಫಾರಸು ಮಾಡಿದೆ. ವ್ಯಂಗ್ಯವೆಂದರೆ ಅದರ ಈ ಶಿಫಾರಸುಗಳು ಬಡ ಮತ್ತು ಮಧ್ಯಮ ಆದಾಯದ ದೇಶಗಳಲ್ಲಿ ಅದು ಮಾರಾಟ ಮಾಡುವ ತನ್ನದೇ ಆದ ಉತ್ಪನ್ನಗಳಿಗೆ ಅನ್ವಯಿಸುವುದಿಲ್ಲ!


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries