ತಿರುವನಂತಪುರಂ: ತಿರುವನಂತಪುರಂ ಕ್ಷೇತ್ರಕ್ಕೆ ಬಿಜೆಪಿಯ ಅಭ್ಯರ್ಥಿಯಾಗಿರುವ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ನಾಮಪತ್ರದ ಜತೆ ಸಲ್ಲಿಸಿರುವ ಆಸ್ತಿ ವಿವರ ಸುಳ್ಳಿನ ಕಂತೆಯಾಗಿದೆ ಎಂದು ಕೇರಳ ಎಡರಂಗ ಚುನಾವಣಾ ಆಯೋಗಕ್ಕೆ ದೂರು ದಾಖಲಿಸಿದೆ.
ನಾಮಪತ್ರದ ಜತೆಗೆ ಅಫಿಡವಿಟ್ ನಲ್ಲಿ ರಾಜೀವ್ ಚಂದ್ರಶೇಖರ್ ನೀಡಿರುವ ಎಲ್ಲ ಮಾಹಿತಿ ಸುಳ್ಳು ಎಂದು ದೂರು ನೀಡಲಾಗಿದೆ. ದೂರಿನ ಪ್ರಕಾರ, ಅಫಿಡವಿಟ್‌ನಲ್ಲಿ ರಾಜೀವ್ ಅವರ ಪ್ರಮುಖ ಕಂಪನಿ ಜುಪಿಟರ್ ಕ್ಯಾಪಿಟಲ್ ಬಗ್ಗೆ ಎಲ್ಲಿಯೂ ಮಾಹಿತಿ ಇಲ್ಲ ಎಂದು ಮುಖ್ಯ ಚುನಾವಣಾ ಆಯುಕ್ತರಿಗೆ ನೀಡಿರುವ ದೂರಿನಲ್ಲಿ ವಿವರಿಸಲಾಗಿದೆ.
ಅಫಿಡವಿಟ್ ನಲ್ಲಿ ರಾಜೀವ್ ಚಂದ್ರಶೇಖರ್ ಅವರು 29 ಕೋಟಿ 9 ಲಕ್ಷ ರೂಪಾಯಿ ಆಸ್ತಿ ಹೊಂದಿರುವುದಾಗಿ ಘೋಷಿಸಿದ್ದಾರೆ. 30 ವರ್ಷದ ಹಿಂದೆ 10ಸಾವಿರ ರೂ.ಗೆ ಖರೀದಿಸಿದ 1942 ಮಾಡೆಲ್ ರೆಡ್ ಇಂಡಿಯನ್ ಸ್ಕಾಟ್ ಬೈಕ್ ಮಾತ್ರ ವಾಹನವಾಗಿದೆ. ಈ ಮಾಹಿತಿಯನ್ನು ಒಳಗೊಂಡಿರುವುದು ತಪ್ಪು ಎಂದು ಎಲ್‌ಡಿಎಫ್‌ನ ದೂರಿನಲ್ಲಿ ಪ್ರಸ್ತಾಪಿಸಲಾಗಿದೆ.
2021-22ರ ಅವಧಿಯಲ್ಲಿ ಕೋಟ್ಯಂತರ ರೂ.ಮೌಲ್ಯದ ಆಸ್ತಿ ಹೊಂದಿದ್ದರೂ ರಾಜೀವ್ ಕೇವಲ 680 ಕೋಟಿ ರೂಪಾಯಿ ತೆರಿಗೆ ಪಾವತಿಸಿದ್ದಾರೆ ಎಂದೂ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಸುಳ್ಳು ಮಾಹಿತಿ ನೀಡಿರುವುದರಿಂದ ನಾಮಪತ್ರಗಳನ್ನು ತಿರಸ್ಕರಿಸಬೇಕೆಂದು ಎಲ್‌ಡಿಎಫ್ ಒತ್ತಾಯಿಸಿದೆ.
ಸುಳ್ಳು ಆರೋಪ: ಇದೇ ವೇಳೆ ರಾಜೀವ್ ಚಂದ್ರಶೇಖರ್ ಪ್ರತಿಕ್ರಿಯಿಸಿ, ನನ್ನ ವಿರುದ್ಧ ಮಾಡಿರುವ ಆರೋಪಗಳೆಲ್ಲವೂ ಸುಳ್ಳು, ಎಲ್ಲವೂ ಕಾನೂನುಬದ್ದವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಈ ಹಿಂದೆ ರಾಜೀವ್ ಚಂದ್ರಶೇಖರ್ ವಿರುದ್ಧ ಇದೇ ಆರೋಪವನ್ನು ಸುಪ್ರೀಂ ಕೋರ್ಟ್ ವಕೀಲರು ಮತ್ತು ಕಾಂಗ್ರೆಸ್ ಮುಂದಿಟ್ಟಿತ್ತು.