ಬದಿಯಡ್ಕ: ಮುಜುಂಗಾವು ಶ್ರೀಭಾರತೀವಿದ್ಯಾಪೀಠದ 2023-24 ನೇ ಸಾಲಿನ ವಾರ್ಷಿಕೋತ್ಸವವು ಶನಿವಾರ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಿತು. ಶಾಲಾ ಗ್ರಂಥಪಾಲಕಿ ವಿಜಯಾಸುಬ್ರಹ್ಮಣ್ಯ ಅವರ ಶಂಖನಾದದೊಂದಿಗೆ ಪ್ರಾರಂಭಗೊಂಡ ಕಾರ್ಯಕ್ರಮಕ್ಕೆ ವಿದ್ಯಾರ್ಥಿನಿಯರು ಪ್ರಾರ್ಥನೆ ಹಾಡಿದರು. ನಂತರ ಶಾಲೆಯ ಪೂರ್ವಪ್ರಾಥಮಿಕದಿಂದ 10ನೇ ತರಗತಿಯ ತನಕದ ಎಲ್ಲಾ ವಿದ್ಯಾರ್ಥಿಗಳೂ ತಮ್ಮ ಪ್ರತಿಭಾ ಪ್ರದರ್ಶನ ನಡೆಯಿತು.
ಅಪರಾಹ್ನ ಮಕ್ಕಳಿಂದ ವೈದಿಕ ಪ್ರಾರ್ಥನೆಯೊಂದಿಗೆ ಸಮಾರೋಪ ಸಮಾರಂಭ ನಡೆಯಿತು. ಮುಖ್ಯ ಉಪಶಿಕ್ಷಕಿ ಚಿತ್ರಾಸರಸ್ವತಿ ವಾರ್ಷಿಕ ವರದಿ ವಾಚಿಸಿದರು. ಮುಖ್ಯ ಶಿಕ್ಷಕ ಶ್ಯಾಂಭಟ್ ದರ್ಭೆಮಾರ್ಗ ಅವರು, ಶಾಲಾ ರಕ್ಷಕ ಶಿಕ್ಷಕರ, ಹಾಗೂ ಪೂರ್ವ ವಿದ್ಯಾರ್ಥಿಗಳ ಸಹಕಾರಗಳನ್ನು ಸ್ಮರಿಸಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಉಪಜಿಲ್ಲಾ ವಿದ್ಯಾಧಿಕಾರಿ ಶಶಿಧರ ಎಂ. ಅವರು ಮಾತನಾಡಿ, ಶಾಲೆಯ ಶಿಕ್ಷಕರು ಮಕ್ಕಳೊಂದಿಗೆ ಹೇಗೆ ವರ್ತಿಸಬೇಕು ಎಂಬುದನ್ನು ಹಾಸ್ಯಮಯವಾಗಿ ಸರಿಯಾದ ಚಿಂತನಶೀಲವಾದ ರೀತಿಯಲ್ಲಿ ಮನದಟ್ಟು ಮಾಡಿದರು. ಆಡಳಿತ ಸಮಿತಿ ಅಧ್ಯಕ್ಷ ಎಸ್.ಎನ್ ರಾವ್ ಮುನ್ನಿಪ್ಪಾಡಿ, ಹಾಗೂ ರಕ್ಷಕ-ಶಿಕ್ಷಕ ಸಂಘದ ಬಾಲಸುಬ್ರಹ್ಮಣ್ಯ ಭಟ್ ಚೆಕ್ಕಣಿಕೆ, ಆಡಳಿತ ಸಮಿತಿ ಕಾರ್ಯದರ್ಶಿ ಶ್ಯಾಮರಾಜ್ ದೊಡ್ಡಮಾಣಿ ಶುಭಹಾರೈಸಿದರು.