ನವದೆಹಲಿ: ಭಾರತೀಯ ಸಾಗರೋತ್ತರ ಕಾಂಗ್ರೆಸ್ ಅಧ್ಯಕ್ಷ ಸ್ಯಾಮ್ ಪಿತ್ರೋಡಾ ಅವರು ಅಮೆರಿಕದ ಉತ್ತರಾಧಿಕಾರ ತೆರಿಗೆ ಬಗ್ಗೆ ಪ್ರಸ್ತಾಪಿಸಿ ಸಂಪತ್ತಿನ ಮರು ಹಂಚಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಅಮೆರಿಕದ ಚಿಕಾಗೋದಲ್ಲಿ ಮಾತನಾಡಿದ ಅವರು, ಅಮೇರಿಕಾದ ಸಂಯುಕ್ತ ಸಂಸ್ಥಾನದಲ್ಲಿ ಪಿತ್ರಾರ್ಜಿತ ತೆರಿಗೆ ಇದೆ. ವ್ಯಕ್ತಿಯ ಸಂಪತ್ತಿನ ಮೇಲೆ ಶೇ. 55 ತೆರಿಗೆ ಹಾಕಲಾಗುತ್ತದೆ. ವ್ಯಕ್ತಿಯ ಮಕ್ಕಳು, ಕುಟುಂಬಕ್ಕೆ ಕೇವಲ 45 ಪ್ರತಿಶತ ಪಾಲನ್ನು ವರ್ಗಾಯಿಸಲಾಗುತ್ತದೆ ಎಂದು ಹೇಳಿದ್ದಾರೆ. ನಾವು ಸಂಪತ್ತಿನ ಮರುಹಂಚಿಕೆ ಬಗ್ಗೆ ಮಾತನಾಡುವಾಗ, ನಾವು ಹೊಸ ನೀತಿಗಳು ಮತ್ತು ಕಾರ್ಯಕ್ರಮಗಳ ಬಗ್ಗೆ ಮಾತನಾಡುತ್ತೇವೆ ಎಂದು ಹೇಳಿರುವ ಸ್ಯಾಮ್ ಪಿತ್ರೋಡಾ, ಇವುಗಳು ಜನರು ಚರ್ಚಿಸಬೇಕಾದ ವಿಷಯಗಳಾಗಿವೆ. ಎಂಡ್ ಆಫ್ ದಿ ಡೇ ತೀರ್ಮಾನ ಏನೆಂದು ನನಗೆ ತಿಳಿದಿಲ್ಲ ಆದರೆ ಸಂಪತ್ತಿನ ಮರುಹಂಚಿಕೆ ಬಗ್ಗೆ ಮಾತನಾಡುವಾಗ ನಾವು ಹೊಸ ನೀತಿಗಳು ಮತ್ತು ಹೊಸ ಕಾರ್ಯಕ್ರಮಗಳ ಬಗ್ಗೆ ಮಾತನಾಡುತ್ತೇವೆ. ಅದು ಬಡ ಜನರ ಹಿತಾಸಕ್ತಿಗಾಗಿ, ಶ್ರೀಮಂತರ ಹಿತಾಸಕ್ತಿಗೆ ಅಲ್ಲ ಎಂದು ಪಿತ್ರೋಡಾ ಹೇಳಿದ್ದಾರೆ.
ಸ್ಯಾಮ್ ಪಿತ್ರೋಡಾ ನೀಡಿರುವ ಈ ಹೇಳಿಕೆಗೆ ಬಿಜೆಪಿ ಕೆಂಡಾಮಂಡಲವಾಗಿದ್ದು ಕಾಂಗ್ರೆಸ್ ವಿರುದ್ಧ ಮುಗಿಬಿದ್ದಿದೆ. ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಅವರು ಪಿತ್ರೋಡಾ ಅವರ ವೀಡಿಯೊವನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿ, ಕಾಂಗ್ರೆಸ್ ಭಾರತವನ್ನು ನಾಶಮಾಡಲು ನಿರ್ಧರಿಸಿದೆ ಎಂದು ಬರೆದಿದ್ದಾರೆ. ಪಿತ್ರೋಡಾ ಹೇಳಿಕೆಯನ್ನು ಉಲ್ಲೇಖಿಸಿದ ಮಾಳವಿಯಾ, ಇದರರ್ಥ ಕಾಂಗ್ರೆಸ್ ಬಂದರೆ, ನಾವು ನಮ್ಮ ಶ್ರಮದಿಂದ ಸಂಪಾದಿಸಿದ ಆಸ್ತಿಯಲ್ಲಿ ಶೇಕಡಾ 50 ರಷ್ಟು ತೆರಿಗೆಯೊಂದಿಗೆ ಕಿತ್ತುಕೊಳ್ಳಲಿದೆ ಎಂದು ಹೇಳಿದ್ದಾರೆ.
ಆಸ್ತಿ ದೋಚುವವರ ಬಗ್ಗೆ ಮತದಾರರು ಜಾಗೃತರಾಗಬೇಕು ಎಂದು ಬಿಜೆಪಿ ವಕ್ತಾರ ಜೈವೀರ್ ಶೆರ್ಗಿಲ್ ಪಿತ್ರೋಡಾ ವಿರುದ್ಧ ವಾಗ್ದಾಳಿ ನಡೆಸಿದರು. "ಕ್ಯಾಟ್ ಔಟ್ ಆಫ್ ದಿ ಬ್ಯಾಗ್! ರಾಹುಲ್ ಗಾಂಧಿಯವರ ಮುಖ್ಯ ಸಲಹೆಗಾರ ಸ್ಯಾಮ್ ಪಿತ್ರೋಡಾ "ಹುವಾ ಟು ಹುವಾ" ಫೇಮ್ ಯುಎಸ್ ನಂತಹ "ಪಿತ್ರಾರ್ಜಿತ ತೆರಿಗೆ" ಪ್ರಸ್ತಾಪಿಸುತ್ತಾರೆ, ಅಲ್ಲಿ ಸರ್ಕಾರವು ನಿಮ್ಮ ಸಂಪತ್ತಿನ ಶೇಕಡಾ 50+ ಅನ್ನು ತೆಗೆದುಕೊಳ್ಳುತ್ತದೆ! ಕಾಂಗ್ರೆಸ್‌ಗೆ ಮತ ಹಾಕುವುದು = ನಿಮ್ಮ ಹಣ + ಆಸ್ತಿ + ಆಸ್ತಿಯನ್ನು ಕಳೆದುಕೊಳ್ಳುವುದು! ಮತದಾರರು ಜಾಗೃತರಾಗಿರಿ, ಆಸ್ತಿ ಕಿತ್ತುಕೊಳ್ಳುವವರು ಇಲ್ಲಿದ್ದಾರೆ! ಎಕ್ಸ್ ನಲ್ಲಿ ಶೆರ್ಗಿಲ್ ಪೋಸ್ಟ್ ಮಾಡಿದ್ದಾರೆ. ಪಕ್ಷದ ವಕ್ತಾರ ಶೆಹಜಾದ್ ಪೂನಾವಾಲಾ ಕೂಡ ಕಾಂಗ್ರೆಸ್ ಜನರು ಕಷ್ಟಪಟ್ಟು ಸಂಪಾದಿಸಿದ ತೆರಿಗೆ ಪಾವತಿಸುವ ಸಂಪನ್ಮೂಲಗಳನ್ನು ದೋಚಲು ಬಯಸಿದೆ ಎಂದು ಆರೋಪಿಸಿದ್ದಾರೆ.
ಭಾರತೀಯ ಸಾಗರೋತ್ತರ ಕಾಂಗ್ರೆಸ್ ಅಧ್ಯಕ್ಷ ಸ್ಯಾಮ್ ಪಿತ್ರೋಡಾ ಹೇಳಿಕೆಯಿಂದ ಕಾಂಗ್ರೆಸ್ ಅಂತರ ಕಾಯ್ದುಕೊಂಡಿದೆ. ಅವರ ವೈಯಕ್ತಿ ಅಭಿಪ್ರಾಯವೇ ಹೊರತು ಕಾಂಗ್ರೆಸ್ ಅಭಿಪ್ರಾಯವಲ್ಲ ಎಂದು ವಕ್ತಾರ ಜೈರಾಂ ರಮೇಶ್ ಸ್ಪಷ್ಟಪಡಿಸಿದ್ದಾರೆ.
ಈ ಸಂಬಂಧ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ಅವರು ಪಿತ್ರೋಡಾ ಮುಕ್ತವಾಗಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಾರೆ. ಪ್ರಜಾಪ್ರಭುತ್ವದಲ್ಲಿ ಒಬ್ಬ ವ್ಯಕ್ತಿಗೆ ತನ್ನ ವೈಯಕ್ತಿಕ ಅಭಿಪ್ರಾಯಗಳನ್ನು ಚರ್ಚಿಸಲು, ವ್ಯಕ್ತಪಡಿಸಲು ಮತ್ತು ಚರ್ಚಿಸಲು ಸ್ವಾತಂತ್ರ್ಯವಿದೆ. ಆದರೆ ಅದರ ಅರ್ಥ ಅವರ ಅಭಿಪ್ರಾಯಗಳು ಯಾವಾಗಲೂ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಹೇಳಿಕೆಯನ್ನು ಪ್ರತಿಬಿಂಬಿಸುತ್ತದೆ ಎಂದರ್ಥವಲ್ಲ ಎಂದು ಬರೆದುಕೊಂಡಿದ್ದಾರೆ.