ನವದೆಹಲಿ:ಚುನಾವಣೆಯ ಬಳಿಕ ರಾಜ್ಯವೊಂದರಲ್ಲಿಯ ಮತದಾನದ ಪ್ರಮಾಣವನ್ನು ಪರಿಷ್ಕರಿಸಿದಾಗ ಸಾಮಾನ್ಯವಾಗಿ ಅದು ಮೇಲ್ಮುಖವಾಗಿರುತ್ತದೆ. ಅಂಚೆ ಮತಗಳು ಮತ್ತು ಅವಧಿ ಮುಕ್ತಾಯಗೊಳ್ಳುವ ಮನ್ನ ಮತಗಟ್ಟೆಗಳನ್ನು ಪ್ರವೇಶಿಸಿದ, ಆದರೆ ನಂತರ ತಮ್ಮ ಹಕ್ಕು ಚಲಾಯಿಸಿದವರ ಮತಗಳನ್ನು ಪರಿಷ್ಕರಣೆಯಲ್ಲಿ ಲೆಕ್ಕಕ್ಕೆ ತೆಗೆದುಕೊಳ್ಳಲಾಗುತ್ತದೆ.
ಚುನಾವಣಾ ಆಯೋಗವು ವಾಸ್ತವದಲ್ಲಿ ರಿಯಲ್-ಟೈಮ್ ಡೇಟಾವನ್ನು ಬಿಡುಗಡೆಗೊಳಿಸಬೇಕಿತ್ತಾದರೂ ಸ್ಯಾಂಪಲ್ ಡೇಟಾದಿಂದ ಪಡೆಯಲಾದ ಅಂಕಿಅಂಶಗಳನ್ನು ಶುಕ್ರವಾರ ನೀಡಲಾಗಿದ್ದು,ಇದನ್ನು ಶನಿವಾರ ಕೆಳಮುಖವಾಗಿ ಪರಿಷ್ಕರಿಸಲಾಗಿದೆ.
'ಶುಕ್ರವಾರ ನಾವು ಹಂಚಿಕೊಂಡಿದ್ದ ಡೇಟಾ ಮತಗಟ್ಟೆಗಳಿಂದ ಸ್ಯಾಂಪಲ್ ಡೇಟಾವನ್ನು ಆಧರಿಸಿದ್ದ ಅಂದಾಜು ಅಂಕಿಅಂಶಗಳಾಗಿವೆ' ಎಂದು ಶನಿವಾರ ಈ ಬಗ್ಗೆ ವಿವರಿಸಿದ ಮುಖ್ಯ ಚುನಾವಣಾಧಿಕಾರಿ ಸತ್ಯವೃತ ಸಾಹೂ ತಿಳಿಸಿದರು.
ಸಂಜೆ ಏಳು ಗಂಟೆಯವರೆಗೆ ಸಂಗ್ರಹಿಸಲಾದ ಡೇಟಾ ಮತಗಟ್ಟೆಗಳಿಂದ ಮಾಹಿತಿಗಳನ್ನು ಆಧರಿಸಿರುತ್ತದೆ. ಆದರೆ ಎಲ್ಲ ಮತಗಟ್ಟೆಗಳು ಸಕಾಲದಲ್ಲಿ ಮಾಹಿತಿಗಳನ್ನು ಕಳುಹಿಸುವುದು ಸಾಧ್ಯವಾಗದ ಕಾರಣದಿಂದ ನಂತರದಲ್ಲಿ ಸಣ್ಣಪುಟ್ಟ ವ್ಯತ್ಯಾಸಗಳನ್ನು ನಿರೀಕ್ಷಿಸಬಹುದು ಎಂದು ಸಾಹೂ ಶುಕ್ರವಾರ ತಿಳಿಸಿದ್ದರು.
ಪರಿಷ್ಕರಣೆಯ ಬಳಿಕ ಚೆನ್ನೈ ಸೆಂಟ್ರಲ್ ಮತದಾನದ ಪ್ರಮಾಣವು ಶೇ.53.91ಕ್ಕೆ ಮತ್ತು ಚೆನ್ನೈ ದಕ್ಷಿಣ ಮತದಾನದ ಪ್ರಮಾಣ ಶೇ.54.27ಕ್ಕೆ ಇಳಿಕೆಯಾಗಿದ್ದರೆ ಧರ್ಮಪುರಿಯಲ್ಲಿ ಶೇ.81.48ಕ್ಕೆ ಏರಿಕಯಾಗಿದೆ.
ತೂತ್ತುಕುಡಿಯಲ್ಲಿ ಶುಕ್ರವಾರ ಶೇ.59.9ರಷ್ಟಿದ್ದ ಮತದಾನದ ಪ್ರಮಾಣ ಶನಿವಾರ ಶೇ.66.88ಕ್ಕೆ ಏರಿಕೆಯಾಗಿದ್ದು,ಇದೂ ವಾಡಿಕೆಗೆ ವಿರುದ್ಧವಾಗಿದೆ. ಸುಮಾರು ಶೇ.7ರಷ್ಟು(ಶೇ.6.92) ವ್ಯತ್ಯಾಸಕ್ಕೆ ಶನಿವಾರ ವಿವರಣೆ ನೀಡಿದ ಸಾಹೂ,ತೂತ್ತುಕುಡಿಯ ಡೇಟಾವನ್ನು ಮಧ್ಯರಾತ್ರಿಯೊಳಗೆ ಅಪ್‌ಡೇಟ್ ಮಾಡಲು ಸಾಧ್ಯವಾಗಿರಲಿಲ್ಲ ಮತ್ತು ಶನಿವಾರವಷ್ಟೇ ಅದನ್ನು ಮಾಡಲಾಗಿತ್ತು ಎಂದು ತಿಳಿಸಿದರು.
'ಸ್ಯಾಂಪಲ್ ಡೇಟಾ'ದಿಂದ ಈ 'ಅಂದಾಜು' ಶೇಕಡಾವಾರು ತಮಿಳುನಾಡಿನಲ್ಲಿ ಬಹಳಷ್ಟು ಅನುಮಾನಗಳನ್ನು ಹುಟ್ಟುಹಾಕಿದೆ.
ಆದರೆ ಈ ವ್ಯತ್ಯಾಸವು ಅಸಮರ್ಥ ಸಂವಹನವನ್ನು ಬೆಟ್ಟು ಮಾಡುತ್ತದೆಯೇ ಹೊರತು ಯಾವುದೇ ಮತದಾನ ಅಕ್ರಮವನ್ನಲ್ಲ. ಮತದಾನದ ಶೇಕಡಾವಾರು ಪ್ರಮಾಣವು ಕೆಲವೊಮ್ಮೆ ಒಂದು ಮತಗಟ್ಟೆಯಿಂದ ಮುಂದಿನ ಮತಗಟ್ಟೆಗೆ ನಾಟಕೀಯವಾಗಿ ಭಿನ್ನವಾಗಿರುತ್ತದೆ ಮತ್ತು ಯಾವುದೇ ಸ್ಯಾಂಪಲ್ ಗಾತ್ರದಿಂದ ಅಂಕಿಅಂಶಗಳನ್ನು 'ಅಂದಾಜು'ಮಾಡಲಾಗುವುದಿಲ್ಲ. ಡೇಟಾ ಸಂಗ್ರಹಣೆಯಲ್ಲಿ ತಪ್ಪು ಶುಕ್ರವಾರ ಬಿಡುಗಡೆಗೊಂಡ ಮತದಾನದ ಪ್ರಮಾಣ ಮತ್ತು ಶನಿವಾರದ ಪರಿಷ್ಕೃತ ಮತದಾನದ ಪ್ರಮಾಣದ ನಡುವೆ ವ್ಯತ್ಯಾಸಗಳ ಹಿಂದಿನ ಕಾರಣಗಳ ಬಗ್ಗೆ ಊಹಾಪೋಹಗಳನ್ನು ಹುಟ್ಟು ಹಾಕಿದೆ ಎಂದು ಮಾಧ್ಯಮ ವರದಿಯು ವಿವರಿಸಿದೆ.