ಕೋಝಿಕ್ಕೋಡ್: ವಡಗರದಲ್ಲಿ ಎಡರಂಗದ ಅಭ್ಯರ್ಥಿ ಹಾಗೂ ಮಾಜಿ ಸಚಿವೆ ಕೆ.ಕೆ.ಶೈಲಜಾ ವಿರುದ್ಧ ನಡೆದ ಸೈಬರ್ ದಾಳಿ ಸ್ವೀಕಾರಾರ್ಹವಲ್ಲದ ತಪ್ಪು ಎಂದು ಶಾಸಕಿ ಕೆ.ಕೆ.ರಮಾ ಹೇಳಿದ್ದಾರೆ.
ಮಹಿಳೆಯರ ವಿರುದ್ಧ ಅಶ್ಲೀಲ ಪ್ರಚಾರವನ್ನು ತಡೆಯುವಲ್ಲಿ ಪೋಸರು ವಿಫಲರಾಗಿದ್ದಾರೆ. ದೂರು ನೀಡಿ 20 ದಿನ ಕಳೆದರೂ ಪೋಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ. ಸೈಬರ್ ದಾಳಿಗೆ ತಾವೂ ಸೇರಿದಂತೆ ಮಹಿಳಾ ಸಾರ್ವಜನಿಕ ಸೇವಕರು ಬಲಿಯಾಗಿದ್ದಾರೆ ಎಂದು ಕೆ.ಕೆ.ರಮಾ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ತಿಳಿಸಿದರು.
ಮೊನ್ನೆಯಷ್ಟೇ ಶೈಲಜಾ ಅವರು ಪತ್ರಿಕಾಗೋಷ್ಠಿಯಲ್ಲಿ ಸೈಬರ್ ದಾಳಿ ಹಾಗೂ ಸೈಬರ್ ಜಾಗದಲ್ಲಿ ನಡೆಯುತ್ತಿರುವ ಹುಸಿ ಪ್ರಚಾರದ ಬಗ್ಗೆ ಮಾತನಾಡುವಾಗ ಅಸಮಾಧಾನ ವ್ಯಕ್ತಪಡಿಸಿದ್ದರು. ನಂತರ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಸಿಪಿಎಂ ರಾಜ್ಯ ಕಾರ್ಯದರ್ಶಿ ಎಂ.ವಿ.ಗೋವಿಂದನ್ ಸೇರಿದಂತೆ ಮುಖಂಡರು ಈ ವಿಚಾರವನ್ನು ತರಾಟೆಗೆ ತೆಗೆದುಕೊಂಡರು. ಈ ಸಂದರ್ಭದಲ್ಲಿ ಯುಡಿಎಫ್ ಮಹಿಳಾ ಶಾಸಕಿ ಈ ಪ್ರತಿಕ್ರಿಯೆ ನೀಡಿದ್ದಾರೆ.
ಕೇರಳದಲ್ಲಿ ಸಾರ್ವಜನಿಕ ವಲಯದಲ್ಲಿ ಮಹಿಳೆಯರು ಎದುರಿಸುತ್ತಿರುವ ದೊಡ್ಡ ಸವಾಲು ಎಂದರೆ ಸೈಬರ್ ದಾಳಿ. ಸೈಬರ್ ದಾಳಿ ವಿರುದ್ಧ ಶೈಲಜಾ ದೂರು ನೀಡಿ 20 ದಿನ ಕಳೆದರೂ ಪೋಲೀಸರು ಯಾವುದೇ ಕ್ರಮ ಕೈಗೊಂಡಿದ್ದಾರೆಯೇ ಎಂಬುದನ್ನು ಸ್ಪಷ್ಟಪಡಿಸಬೇಕು. ಶೈಲಜಾ ವಿರುದ್ಧ ಕೋವಿಡ್ ಕಾಲದ ಭ್ರಷ್ಟಾಚಾರದ ಆರೋಪ ವೈಯಕ್ತಿಕ ನಿಂದನೆ ಅಲ್ಲ.ಅದು ಆಡಳಿತಾತ್ಮಕ ವೈಫಲ್ಯದ ಬಗೆಗಿನ ಟೀಕೆ. ಅದು ರಾಜಕೀಯ. ಆದರೆ ಇದು ಮಹಿಳೆಯರಿಗೆ ಸಂಬಂಧಿಸಿದ ವಿಷಯ. ಅದರಲ್ಲಿ ನಾವೆಲ್ಲ ಸಮಾನ ಅನುಭವಿಗಳು. ಎಡಪಕ್ಷದ ನೇತಾರೆಯೇ ದೂರು ನೀಡಿ 20 ದಿನ ಕಳೆದರೂ ಪೋಲೀಸರು ಕ್ರಮ ಕೈಗೊಳ್ಳದಿರುವುದು ಗೃಹ ಇಲಾಖೆಯ ವೈಫಲ್ಯ ಎಂದು ಕೆ.ಕೆ.ರಮಾ ಆರೋಪಿಸಿದ್ದಾರೆ.
ಇದರ ಹಿಂದೆ ಮೂಲ ಸಮಸ್ಯೆಯಿಂದ ದಿಕ್ಕು ತಪ್ಪಿಸುವ ನಡೆ ಇದೆ. ಸೈಬರ್ ದಾಳಿಯನ್ನು ಯಾರು ಮಾಡುತ್ತಿದ್ದಾರೆಂದು ಪತ್ತೆ ಮಾಡಿ. ಈ ನಿಟ್ಟಿನಲ್ಲಿ ಶೈಲಜಾ ಟೀಚರ್ ಅವರ ಬೆಂಬಲಿಗಳಾಗಿ ನಿಲ್ಲುವುದಾಗಿ ಯುಡಿಎಫ್ ಮಹಿಳಾ ಶಾಸಕರಾದ ಕೆ.ಕೆ.ರಮಾ ಮತ್ತು ಉಮಾ ಥಾಮಸ್ ಹೇಳಿದ್ದಾರೆ.