ತಿರುವನಂತಪುರಂ: ಕರ್ನಾಟಕದಲ್ಲಿ ಬಿಜೆಪಿ ಅಭ್ಯರ್ಥಿಯ ಪೋಸ್ಟರ್‌ನಲ್ಲಿ ಎಲ್‌ಡಿಎಫ್‌ನ ಸಚಿವ ಕೆ.ಕೃಷ್ಣನ್‌ಕುಟ್ಟಿ ಮತ್ತು ಕೇರಳ ಜೆಡಿಎಸ್ ರಾಜ್ಯಾಧ್ಯಕ್ಷ ಮ್ಯಾಥ್ಯೂ ಟಿ.ಥಾಮಸ್ ಫೋಟೋ ಹಾಕಿರುವುದಕ್ಕೆ ಅಸಮಾಧಾನ ವ್ಯಕ್ತವಾಗಿದೆ.
ಪೋಸ್ಟರ್‌ನಲ್ಲಿ ತಮ್ಮ ಫೋಟೋ ಕಾಣಿಸಿಕೊಂಡಿರುವುದರ ಹಿಂದೆ ರಾಜಕೀಯ ಆಟ ಅಡಗಿದೆ ಎಂದು ಸಚಿವ ಕೃಷ್ಣನ್‌ಕುಟ್ಟಿ ಆರೋಪಿಸಿದ್ದಾರೆ. ಅಲ್ಲದೇ ನಕಲಿ ಪೋಸ್ಟರ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.
ಮ್ಯಾಥ್ಯೂ ಟಿ.ಥಾಮಸ್ ಕೂಡ ಎಡರಂಗದಲ್ಲಿ ದೃಢವಾಗಿ ಉಳಿಯುವುದಾಗಿ ಹೇಳಿಕೆ ನೀಡಿದ್ದಾರೆ.
ಬೆಂಗಳೂರು ಗ್ರಾಮಾಂತರ ಅಭ್ಯರ್ಥಿ ಹಾಗೂ ದೇವೇಗೌಡರ ಅಳಿಯ ಡಾ. ಸಿಎನ್ ಮಂಜುನಾಥ್ ಅವರ ಪ್ರಚಾರದ ಪೋಸ್ಟರ್ ನಲ್ಲಿ ಕೇರಳದ ಎಲ್ ಡಿಎಫ್ ನಾಯಕರ ಚಿತ್ರಗಳಿವೆ. ಜೆಡಿಎಸ್ ಸೇವಾದಳದ ಮುಖಂಡ ಬಸವರಾಜ್ ಪೋಸ್ಟರ್ ಬದಲಿಗೆ ಈ ನಾಯಕರ ಚಿತ್ರಗಳನ್ನು ಹಾಕಲಾಗಿದೆ. ರಾಷ್ಟ್ರಮಟ್ಟದಲ್ಲಿ ಎನ್ ಡಿಎ ಜತೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್ ಕೇರಳದಲ್ಲಿ ಎಲ್ ಡಿಎಫ್ ಜತೆ ಮೈತ್ರಿ ಮಾಡಿಕೊಂಡಿದೆ.
ಬೆಂಗಳೂರಿನ ರೈಲ್ವೆ ಲೇಔಟ್‌ನಲ್ಲಿ ಗುರುವಾರ ನಡೆದ ಕಾರ್ಯಕ್ರಮದ ಪೋಸ್ಟರ್‌ನಲ್ಲಿ ಕೇರಳದ ನಾಯಕರ ಚಿತ್ರ ಕಾಣಿಸಿಕೊಂಡಿದೆ. 2023 ರ ಕರ್ನಾಟಕ ವಿಧಾನಸಭಾ ಚುನಾವಣೆಯ ನಂತರ ಜೆಡಿಎಸ್ ಎನ್‌ಡಿಎ ಮೈತ್ರಿಕೂಟಕ್ಕೆ ಸೇರಿತು. ಎನ್ ಡಿಎ ಸೇರುವ ರಾಷ್ಟ್ರೀಯ ನಾಯಕತ್ವದ ನಿರ್ಧಾರವನ್ನು ತಿರಸ್ಕರಿಸಲು ಜೆಡಿಎಸ್ ಕೇರಳ ಘಟಕ ಮುಂದಾಗಿತ್ತು.