ಕಾಸರಗೋಡು: ಚುನಾವಣಾ ನೀತಿಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ಸಿಪಿಐಎಂ ಕಾಸರಗೋಡು ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿಗೆ ಚುನಾವಣಾ ಆಯೋಗ ಶೋಕಾಸ್ ನೋಟಿಸ್ ನೀಡಿದೆ. ಮಾದರಿ ನೀತಿ ಸಂಹಿತೆ ನೋಡಲ್ ಅಧಿಕಾರಿ ಹಾಗೂ ಅಪರ ಜಿಲ್ಲಾಧಿಕಾರಿ ಸುಫಿಯಾನ್ ಅಹಮದ್ ಈ ನೋಟೀಸು ಜಾರಿಗೊಳಿಸಿದ್ದಾರೆ.
ಅನುಮತಿಯಿಲ್ಲದೆ ರೋಡ್ ಶೋ ನಡೆಸಿರುವುದು, ಧ್ವನಿವರ್ಧಕಗಳ ಬಳಕೆ ಮತ್ತು ವಾಣಿಜ್ಯ ವಾಹನಗಳ ಮೇಲೆ ಧ್ವಜ ಮತ್ತು ಸ್ಟಿಕ್ಕರ್ ಅಳವಡಿಸಿರುವುದಕ್ಕಾಗಿ ಈ ನೋಟಿಸ್ ಜಾರಿಗೊಳಿಸಲಾಗಿದೆ. ನೋಟಿಸ್ ಜಾರಿ ಮಾಡಿದ 48 ಗಂಟೆಯೊಳಗೆ ಉತ್ತರ ನೀಡದಿದ್ದಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ನೋಡಲ್ ಅಧಿಕಾರಿ ಶೋಕಾಸ್ ನೋಟಿಸ್‍ನಲ್ಲಿ ತಿಳಿಸಿದ್ದಾರೆ. ಮಾದರಿ ನೀತಿ ಸಂಹಿತೆಯ ಪ್ರಕಾರ ಮುಂಚಿತವಾಗಿ ಅನುಮತಿ ಇಲ್ಲದೆ ರೋಡ್ ಶೋ ಆಯೋಜಿಸುವಂತಿಲ್ಲ. ರೋಡ್ ಶೋನಲ್ಲಿ ಭಾಗವಹಿಸುವ ವಾಹನಗಳು ಮತ್ತು ವ್ಯಕ್ತಿಗಳ ಸಂಖ್ಯೆಯನ್ನು ಮುಂಚಿತವಾಗಿ ವರದಿ ಮಾಡಬೇಕು. ಯಾವುದೇ ಸಂದರ್ಭದಲ್ಲೂ ಮಕ್ಕಳನ್ನು ರೋಡ್ ಶೋನಲ್ಲಿ ಭಾಗವಹಿಸದಿರುವಂತೆ ಸ್ಪಷ್ಟಪಡಿಸಲಾಗಿದೆ. ರೋಡ್ ಶೋಗಳಲ್ಲಿ ಪ್ರಾಣಿಗಳನ್ನು ಪ್ರದರ್ಶಿಸುವುದನ್ನು ಸಹ ನಿಷೇಧಿಸಲಾಗಿದೆ. ಅನುಮತಿ ಇಲ್ಲದೆ ಧ್ವನಿವರ್ಧಕ ಬಳಸಬಾರದು. ಧ್ವನಿವರ್ಧಕ ಬಳಸುವ ವಾಹನಗಳ ನೋಂದಣಿ ಸಂಖ್ಯೆಯನ್ನು ಅಧಿಕಾರಿಗಳಿಗೆ ನೀಡಿ ಮುಂಚಿತವಾಗಿ ಅನುಮತಿ ಪಡೆಯಬೇಕು. ಮಾರ್ಪಾಡುಗೊಳಿಸಿದ ವಾಹನಗಳನ್ನು ಚುನಾವಣಾ ಪ್ರಚಾರಕ್ಕೆ ಬಳಸದಿರುವಂತೆಯೂ ಸಊಚಿಸಲಾಗಿದೆ.