ಮಂಜೇಶ್ವರ: ಮಂಜೇಶ್ವರ ರಾಗಂ ಜಂಕ್ಷನಿನಲ್ಲಿ ರಸ್ತೆ ದಾಟಲು ಸೂಕ್ತ ವ್ಯವಸ್ಥೆಯನ್ನು ಕಲ್ಪಿಸಲು ಮುಂದಾಗದ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ನಿಲ್ರ್ಯಕ್ಷವನ್ನು ವಿರೋಧಿಸಿ ಕಳೆದ ಎರಡು ತಿಂಗಳಿನಿಂದ ನಡೆಯುತ್ತಿರುವ ಅನಿರ್ಧಿಷ್ಟಾವಧಿ ಮುಷ್ಕರದ ಭಾಗವಾಗಿ ಶುಕ್ರವಾರ ಉದ್ಯಾವರದಿಂದ ಮಂಜೇಶ್ವರ ರಾಗಂ ಜಂಕ್ಷನ್ ತನಕ ಬೃಹತ್ ಜನಪರ ಪ್ರತಿಭಟನಾ ಮೆರವಣಿಗೆ ನಡೆಯಿತು. ನೂತನ ಷಟ್ಪಥ ರಾ.ಹೆದ್ದಾರಿಯಲ್ಲಿ ಹಮ್ಮಿಕೊಂಡ ಪ್ರತಿಭಟನಾ ಜಾಥಾಕ್ಕೆ ಅತ್ತಾವುಲ್ಲ ತಂಙಳ್ ಚಾಲನೆ ನೀಡಿದರು. ಝಕರಿಯ್ಯ ಅಧ್ಯಕ್ಷತೆ ವಹಿಸಿದ್ದರು.
ಪ್ರತಿಭಟನಾ ಮೆರವಣಿಗೆಯಲ್ಲಿ ಮಹಿಳೆಯರು, ವೃದ್ಧರು, ವಿಶೇಷ ಚೇತನರು ಯುವಕರು ಸೇರಿದಂತೆ ಸಹಸ್ರಾರು ಮಂದಿ ಪಾಲ್ಗೊಂಡರು. ಈ ಸಂದರ್ಭ ರಾಜ ಬೆಳ್ಚಡ, ಸಂಜೀವ ಶೆಟ್ಟಿ, ಮಂಜೇಶ್ವರ ಗ್ರಾಮ ಪಂಚಾಯತಿ ಅಧ್ಯಕ್ಷೆ ಜೀನ್ ಲವಿನಾ ಮೊಂತೇರೋ, ಹಮೀದ್ ತಂಙಳ್ ಸಹಿತ ಹಲವು ಪ್ರಮುಖರು ಪಾಲ್ಗೊಂಡರು.
ಷಟ್ಪಥ ರಸ್ತೆ ಕಾಮಗಾರಿ ಆರಂಭವಾಗುವ ಮುನ್ನವೇ ಜನರ ಬೇಡಿಕೆಗೆ ಕಿಂಚತ್ತೂ ಬೆಲೆ ಕಲ್ಪಿಸದ ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯ ನಾಡಿನ ಜನತೆಯ ಪ್ರತಿಭಟನೆಗೆ ಕಾರಣವಾಗಿದ್ದು ರಾಜಕೀಯ ಜಾತಿ ಮತ ಭೇಧವನ್ನು ಮರೆತು ನಡೆದ ಬೃಹತ್ ಸಮಾವೇಶ ಇದಕ್ಕೆ ಸಾಕ್ಷಿಯಾಯಿತು.
ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಇಲ್ಲ ಸಲ್ಲದ ಕಾರಣ ನೀಡಿ ಲೋಪ ಮರೆಮಾಚಲು ಯತ್ನಿಸುತ್ತಿರುವುದರ ವಿರುದ್ಧ ಪ್ರತಿಭಟನಾ ಜಾಥಾದಲ್ಲಿ ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ವಿರುದ್ಧ ವ್ಯಾಪಕ ಆಕ್ರೋಶ ಧ್ವನಿಗಳು ಮೊಳಗಿತು. ರಾಷ್ಟ್ರೀಯ ಹೆದ್ದಾರಿಯ ಪ್ರದೇಶದಲ್ಲಿ ರಸ್ತೆ ಕಾಮಗಾರಿ ಶೇ.100ರಷ್ಟು ಪೂರ್ಣಗೊಂಡ ಪ್ರದೇಶಗಳಲ್ಲಿ ಅಂಡರ್ ಪಾಸ್ ನೀಡಲು ಅಧಿಕಾರಿಗಳಿಗೆ ಸಾಧ್ಯವಾಗಿರುವಾಗ ಮಂಜೇಶ್ವರ ರಾಗಂ ಜಂಕ್ಷನ್‍ನಲ್ಲಿ ಅಧಿಕಾರಿಗಳು ಹಿಂದೇಟು ಹಾಕುತ್ತಿರುವುದರ ವಿರುದ್ಧ ಪ್ರತಿಭಟನಾ ನಿರತರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಯಿತು. ರಾಗಂ ಜಂಕ್ಷನಿನಲ್ಲಿ ಅಲ್ಪ ಸಮಯ ರಾ.ಹೆದ್ದಾರಿ ರಸ್ತೆ ತಡೆದು ಪ್ರತಿಭಟನೆ ನಡೆಸಲಾಯಿತು.
ರಾ. ಹೆದ್ದಾರಿ ಅಭಿವೃದ್ಧಿ ಸಮಿತಿಯ ಅಶ್ರಫ್ ಬಡಾಜೆ, ಯಾದವ ಬಡಾಜೆ, ಎಸ್ ಎಂ ಬಶೀರ್, ಜಬ್ಬಾರ್ ಬಹರೈನ್, ಹಸೈನಾರ್, ಹನೀಫ ಸುರಬಿ ಮೊದಲಾದವರು ನೇತೃತ್ವ ನೀಡಿದರು.