ನವದೆಹಲಿ: ಸಿಖ್ ಪ್ರತ್ಯೇಕತಾವಾದಿ ಹರ್‌ದೀಪ್ ಸಿಂಗ್ ನಿಜ್ಜರ್ ಹತ್ಯೆ ಪ್ರಕರಣದ ವರದಿ ಮಾಡಿದ ಕಾರಣಕ್ಕಾಗಿ ಆಸ್ಟ್ರೇಲಿಯಾ ಮೂಲದ ಪತ್ರಕರ್ತೆಯೊಬ್ಬರ ಕೆಲಸದ ವೀಸಾದ ಅವಧಿಯನ್ನು ವಿಸ್ತರಿಸಲು ಭಾರತ ಸರ್ಕಾರ ನಿರಾಕರಿಸಿದೆ. ಈ ಹಿನ್ನೆಲೆಯಲ್ಲಿ ಅವರು ಏಪ್ರಿಲ್ 19ರಂದು ಭಾರತವನ್ನು ತೊರೆದು ಆಸ್ಟ್ರೇಲಿಯಾಕ್ಕೆ ತೆರಳಿದ್ದಾರೆ ಎಂದು ತಿಳಿದುಬಂದಿದೆ.
ಆಸ್ಟ್ರೇಲಿಯಾ ಬ್ರಾಡ್‌ಕಾಸ್ಟಿಂಗ್ ಕಾರ್ಪೊರೇಷನ್‌ನ ದಕ್ಷಿಣ ಏಷ್ಯಾದ ಬ್ಯೂರೊ ಮುಖ್ಯಸ್ಥರಾಗಿ ಕೆಲಸ ನಿರ್ವಹಿಸುತ್ತಿದ್ದ ಅವನಿ ಡಾಯಸ್ ಎಂಬುವರೇ ಕೆಲಸದ ವೀಸಾ ಅವಧಿ ಮುಂದುವರಿಸಲು ನಿರಾಕರಿಸಿದ ಕಾರಣಕ್ಕೆ ಭಾರತ ತ್ಯಜಿಸಿದವರು.
ಈ ಕುರಿತು 'ಎಕ್ಸ್'ನಲ್ಲಿ ಪ್ರತಿಕ್ರಿಯಿಸಿರುವ ಅವರು, 'ಸಿಖ್ ಪ್ರತ್ಯೇಕತಾವಾದಿ ಹರ್‌ದೀಪ್ ಸಿಂಗ್ ನಿಜ್ಜರ್ ಹತ್ಯೆ ಪ್ರಕರಣದ ಕುರಿತು ನಾನು ವರದಿ ಮಾಡಿದ್ದನ್ನು ಭಾರತ ಸರ್ಕಾರ ವಿರೋಧಿಸಿತ್ತು. ಅಲ್ಲದೆ, ಹರ್‌ದೀಪ್ ಸಿಂಗ್ ನಿಜ್ಜರ್ ಹತ್ಯೆಯ ವರದಿಗಾರಿಕೆ ವೇಳೆ ನಾನು ಎಲ್ಲಾ ಮಿತಿಯನ್ನು ಮೀರಿದ್ದೇನೆ ಎಂದು ಹೇಳಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ, ನನ್ನ ವೀಸಾ ಅವಧಿಯನ್ನು ವಿಸ್ತರಿಸಲು ನಿರಾಕರಿಸಿದೆ. ಹೀಗಾಗಿ ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನದ ದಿನವಾದ ಏಪ್ರಿಲ್ 19ರಂದೇ ನಾನು ಭಾರತ ತ್ಯಜಿಸಬೇಕಾಯಿತು. ಇದನ್ನು ಮೋದಿ ಅವರು ಪ್ರಜಾಪ್ರಭುತ್ವದ ತಾಯಿ ಎಂದು ಬಣ್ಣಿಸುತ್ತಾರೆ' ಎಂದು ವ್ಯಂಗ್ಯವಾಡಿದ್ದಾರೆ.