ನವದೆಹಲಿ:ಎಪ್ರಿಲ್ ಒಂದರಿಂದ ಅಗತ್ಯ ಔಷಧಿಗಳ ಬೆಲೆಗಳಲ್ಲಿ ಏರಿಕೆಯಾಗಿದೆ. ರಾಷ್ಟ್ರೀಯ ಅಗತ್ಯ ಔಷಧಿಗಳ ಪಟ್ಟಿಯಲ್ಲಿರುವ ಔಷಧಿಗಳ ಗರಿಷ್ಠ ಮಾರಾಟ ಬೆಲೆ (ಎಮ್‌ಆರ್ಪಿ)ಯಲ್ಲಿ 0.00551 ಶೇಕಡ ಏರಿಕೆ ಮಾಡುವುದಾಗಿ ರಾಷ್ಟ್ರೀಯ ಔಷಧಿ ಬೆಲೆ ನಿಗದಿ ಪ್ರಾಧಿಕಾರ (ಎನ್ಪಿಪಿಎ) ಘೋಷಿಸಿದೆ.
ರಾಷ್ಟ್ರೀಯ ಅಗತ್ಯ ಔಷಧಿಗಳ ಪಟ್ಟಿಯಲ್ಲಿರುವ 923 ಫಾರ್ಮ್ಯುಲೇಶನ್ ಔಷಧಿಗಳ ಪರಿಷ್ಕೃತ ಗರಿಷ್ಠ ಮಾರಾಟ ಬೆಲೆಗಳು ಮತ್ತು ಇತರ 65 ಔಷಧಿಗಳ ಪರಿಷ್ಕೃತ ಚಿಲ್ಲರೆ ಮಾರಾಟ ಬೆಲೆಗಳನ್ನು ಒಳಗೊಂಡ ತನ್ನ ವಾರ್ಷಿಕ ಪಟ್ಟಿಯನ್ನು ಔಷಧಿ ಇಲಾಖೆ ಬಿಡುಗಡೆಗೊಳಿಸಿದೆ. ಈ ಎಲ್ಲಾ ಪರಿಷ್ಕೃತ ಬೆಲೆಗಳು ಎಪ್ರಿಲ್ 1ರಿಂದಲೇ ಜಾರಿಗೆ ಬಂದಿವೆ.
ಸಗಟು ಬೆಲೆ ಸೂಚ್ಯಂಕ (ಡಬ್ಲ್ಯುಪಿಐ)ಕ್ಕೆ ಅನುಗುಣವಾಗಿ ಔಷಧಿಗಳ ದರ ಪರಿಷ್ಕರಣೆಯನ್ನು ಮಾಡಲಾಗಿದೆ ಎಂದು ಕೇಂದ್ರ ಸರಕಾರ ಹೇಳಿದೆ. ''ವಾಣಿಜ್ಯ ಮತ್ತು ಕೈಗಾರಿಕೆ ಸಚಿವಾಲಯದ ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಇಲಾಖೆಯ ಆರ್ಥಿಕ ಸಲಹೆಗಾರರ ಕಚೇರಿ ನೀಡಿರುವ ಸಗಟು ಬೆಲೆ ಸೂಚ್ಯಂಕದ ಆಧಾರದಲ್ಲಿ, ಔಷಧಿಗಳ 2022ರ ಬೆಲೆಗಿಂತ 2023ರ ಬೆಲೆಯಲ್ಲಿ ವಾರ್ಷಿಕ 0.00551 ಶೇಕಡ ಹೆಚ್ಚಳವಾಗಿರುತ್ತದೆ'' ಎಂದು ಎನ್ಪಿಪಿಎ ಹೊರಡಿಸಿರುವ ಅಧಿಸೂಚನೆಯೊಂದು ತಿಳಿಸಿದೆ.
ಈ ಅಧಿಸೂಚನೆಯ ಪ್ರಕಾರ, ಔಷಧಿಗಳ ತಯಾರಕರು ರಾಷ್ಟ್ರೀಯ ಅಗತ್ಯ ಔಷಧಿಗಳ ಪಟ್ಟಿಯಲಿರುವ ಔಷಧಿಗಳ ಗರಿಷ್ಠ ಮಾರಾಟ ಬೆಲೆಗಳನ್ನು ಸಗಟು ಬೆಲೆ ಸೂಚ್ಯಂಕಕ್ಕೆ ಅನುಗುಣವಾಗಿ ಹೆಚ್ಚಿಸಬಹುದಾಗಿದೆ ಮತ್ತು ಅದಕ್ಕಾಗಿ ಸರಕಾರದಿಂದ ಪೂರ್ವಾನುಮತಿ ಪಡೆಯುವ ಅಗತ್ಯವಿರುವುದಿಲ್ಲ.
ಇದಕ್ಕೂ ಮೊದಲು, ಕಳೆದ ವರ್ಷ ಔಷಧಿಗಳ ಬೆಲೆಯನ್ನು 12 ಶೇಕಡ ಮತ್ತು 2022ರಲ್ಲಿ 10 ಶೇಕಡದಷ್ಟು ಹೆಚ್ಚಿಸಲಾಗಿತ್ತು. ಈ ವಾಸ್ತವದ ಹೊರತಾಗಿಯೂ, ಔಷಧಿಗಳ ಪ್ರಸಕ್ತ ಬೆಲೆ ಏರಿಕೆಯು ಆಯಂಟಿಬಯಾಟಿಕ್ಸ್ ಮತ್ತು ಪೆಯಿನ್ ಕಿಲ್ಲರ್ಗಳು ಮುಂತಾದ ಔಷಧಿಗಳ ವೆಚ್ಚವನ್ನು ಅತ್ಯಲ್ಪ ಪ್ರಮಾಣದಲ್ಲಷ್ಟೇ ಏರಿಸುತ್ತದೆ ಎಂಬುದಾಗಿ ಜನರನ್ನು ನಂಬಿಸಲು ಸರಕಾರ ಪ್ರಯತ್ನಿಸುತ್ತಿದೆ.
ಪ್ರಸಕ್ತ, ಭಾರತದ ರಾಷ್ಟ್ರೀಯ ಅಗತ್ಯ ಔಷಧಿಗಳ ಪಟ್ಟಿಯಲ್ಲಿ 400 ಮಾಲಿಕ್ಯೂಲ್ ಔಷಧಿಗಳು ಮತ್ತು 960 ಫಾರ್ಮ್ಯುಲೇಶನ್ ಔಷಧಿಗಳಿವೆ. ಅತ್ಯಗತ್ಯವಲ್ಲದ ಔಷಧಿಗಳ ಬೆಲೆಗಳನ್ನು ಸರಕಾರ ನಿಯಂತ್ರಿಸುತ್ತಿದೆ. ಈ ಔಷಧಿಗಳ ಗರಿಷ್ಠ ಮಾರಾಟ ಬೆಲೆಯನ್ನು ತಯಾರಕ ಕಂಪೆನಿಗಳು ವಾರ್ಷಿಕ 10 ಶೇಕಡಕ್ಕಿಂತ ಹೆಚ್ಚಿಸದಂತೆ ನೋಡಿಕೊಳ್ಳುವುದು ಇದರ ಉದ್ದೇಶವಾಗಿದೆ. ಎನ್ಪಿಪಿಎ ಡಿಪಿಸಿಒ (2013) ಮಾದರಿಯನ್ನು ಅನುಸರಿಸುತ್ತಿದೆ. ಸಗಟು ಬೆಲೆ ಸೂಚ್ಯಂಕದಲ್ಲಿ ಆಗುವ ಬದಲಾವಣೆಗಳಿಗೆ ಅನುಗುಣವಾಗಿ ಔಷಧಿಗಳ ಬೆಲೆ ಹೆಚ್ಚಳ ಮಾಡಲು ಡಿಪಿಸಿಒ (2013) ಅವಕಾಶ ಮಾಡಿಕೊಡುತ್ತದೆ.
ಬೆಲೆ ಏರಿಕೆ ನಗಣ್ಯ: ಸರಕಾರ
ಹೊಸ ಬೆಲೆ ಏರಿಕೆ ಬಳಿಕ, ಗರಿಷ್ಠ ಮಾರಾಟ ಬೆಲೆ 90 ರೂಪಾಯಿಯಿಂದ 261 ರೂಪಾಯಿವರೆಗೆ ಇರುವ 54 ಔಷಧಿಗಳ ಬೆಲೆಯಲ್ಲಿ ಕೇವಲ ಒಂದು ಪೈಸೆ ಏರಿಕೆಯಾಗುತ್ತದೆ ಎಂದು ವಾಣಿಜ್ಯ ಮತ್ತು ಕೈಗಾರಿಕೆ ಸಚಿವಾಲಯ ಹೇಳಿದೆ. ಅನುಮೋದಿತ ಬೆಲೆ ಏರಿಕೆಯು ಅತ್ಯಂತ ಕಡಿಮೆಯಾಗಿರುವುದರಿಂದ ಕಂಪೆನಿಗಳು ಬೆಲೆ ಏರಿಕೆಗೆ ಮುಂದಾಗಬಹುದು ಅಥವಾ ಮುಂದಾಗದೆ ಇರಬಹುದು. ಹಾಗಾಗಿ, 2024-25ರಲ್ಲಿ, ಸಗಟು ಬೆಲೆ ಸೂಚ್ಯಂಕದ ಆಧಾರದಲ್ಲಿ ಔಷಧಿಗಳ ಗರಿಷ್ಠ ಮಾರಾಟ ಬೆಲೆಯಲ್ಲಿ ಬಹುತೇಕ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಸಚಿವಾಲಯ ತಿಳಿಸಿದೆ.