ನವದೆಹಲಿ: ಕ್ರಿಮಿನಲ್ ಅಪರಾಧಗಳಿಗೆ ಸಂಬಂಧಿಸಿದಂತೆ ಹೊಸದಾಗಿ ರೂಪಿಸಿರುವ ಕಾನೂನುಗಳು ಸಮಾಜದ ಪಾಲಿಗೆ ಪರಿವರ್ತನೆಯ ಘಟ್ಟವಿದ್ದಂತೆ ಎಂದು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ.ವೈ. ಚಂದ್ರಚೂಡ್ ಅವರು ಪ‍್ರಶಂಸೆ ವ್ಯಕ್ತಪಡಿಸಿದ್ದಾರೆ.
'ಕ್ರಿಮಿನಲ್ ನ್ಯಾಯದಾನ ವ್ಯವಸ್ಥೆಯಲ್ಲಿ ಭಾರತದ ಪ್ರಗತಿಯ ಪಥ' ಎಂಬ ವಿಷಯದ ಕುರಿತ ಸಮಾವೇಶದಲ್ಲಿ ಶನಿವಾರ ಮಾತನಾಡಿದ ಅವರು, ಹೊಸ ಕಾನೂನುಗಳನ್ನು ಅನುಷ್ಠಾನಕ್ಕೆ ತರುವವರು ಅದಕ್ಕೆ ಒಗ್ಗಿಕೊಂಡಲ್ಲಿ, ಆ ಕಾನೂನುಗಳು ಯಶಸ್ಸು ಕಾಣಲಿವೆ ಎಂದು ಹೇಳಿದರು.
ಕ್ರಿಮಿನಲ್ ನ್ಯಾಯದಾನಕ್ಕೆ ಸಂಬಂಧಿಸಿದಂತೆ ಭಾರತದಲ್ಲಿ ಇದ್ದ ಕಾನೂನಿನ ಚೌಕಟ್ಟನ್ನು ಈ ಹೊಸ ಕಾನೂನುಗಳು ಹೊಸ ಕಾಲಘಟ್ಟಕ್ಕೆ ತಂದು ನಿಲ್ಲಿಸಿವೆ ಎಂದು ನ್ಯಾಯಮೂರ್ತಿ ಚಂದ್ರಚೂಡ್ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಸಂತ್ರಸ್ತರ ಹಿತವನ್ನು ಕಾಯಲು, ಸಮರ್ಥವಾಗಿ ತನಿಖೆಯನ್ನು ಕೈಗೊಳ್ಳಲು ಹಾಗೂ ಅಪರಾಧಿಗಳಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳಲು ತೀರಾ ಅಗತ್ಯವಾಗಿದ್ದ ಸುಧಾರಣೆಗಳನ್ನು ತರಲಾಗಿದೆ ಎಂದು ಅವರು ಹೇಳಿದರು.
'ಕ್ರಿಮಿನಲ್ ಅಪರಾಧಗಳಿಗೆ ಸಂಬಂಧಿಸಿದ ಮೂರು ಹೊಸ ಕಾನೂನುಗಳ ಅನುಷ್ಠಾನದ ಕಾರಣದಿಂದಾಗಿ ಭಾರತದ ಕ್ರಿಮಿನಲ್ ನ್ಯಾಯದಾನ ವ್ಯವಸ್ಥೆಯು ಗಣನೀಯ ಬದಲಾವಣೆ ಕಾಣಲಿದೆ... ಕ್ರಿಮಿನಲ್ ಅಪರಾಧಗಳಿಗೆ ಸಂಬಂಧಿಸಿದ ಕಾನೂನುಗಳಷ್ಟು ವ್ಯಾಪಕವಾಗಿ ಬೇರೆ ಯಾವ ಕಾನೂನು ಕೂಡ ನಮ್ಮ ಸಮಾಜದ ಮೇಲೆ ಪರಿಣಾಮ ಉಂಟುಮಾಡುವುದಿಲ್ಲ. ಹೀಗಾಗಿ, ಈ ಕಾನೂನುಗಳು ನಮ್ಮ ಸಮಾಜದ ಪಾಲಿಗೆ ಪರಿವರ್ತನೆಯ ಘಟ್ಟದಂತೆ ಇವೆ' ಎಂದು ಅವರು ಹೇಳಿದರು.
ಈ ಕಾನೂನುಗಳನ್ನು ಸಂಸತ್ತು ರೂಪಿಸಿರುವುದು ಭಾರತವು ಬದಲಾವಣೆ ಕಾಣುತ್ತಿದೆ, ಮುಂದಕ್ಕೆ ನಡೆಯುತ್ತಿದೆ, ಸದ್ಯದ ಸವಾಲುಗಳನ್ನು ಎದುರಿಸಲು ಕಾನೂನಿನ ಹೊಸ ಪರಿಕರಗಳು ದೇಶಕ್ಕೆ ಬೇಕಿವೆ ಎಂಬುದರ ಸ್ಪಷ್ಟ ಸೂಚನೆ ಎಂದು ಅವರು ಹೇಳಿದರು.
ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್, ಅಟಾರ್ನಿ ಜನರಲ್ ಆರ್. ವೆಂಕಟರಮಣಿ ಮತ್ತು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಸಮಾರಂಭದಲ್ಲಿ ಹಾಜರಿದ್ದರು.
ಕ್ರಿಮಿನಲ್ ಅಪರಾಧಗಳಿಗೆ ಸಂಬಂಧಿಸಿದಂತೆ ಭಾರತೀಯ ನ್ಯಾಯ ಸಂಹಿತೆ, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಮತ್ತು ಭಾರತೀಯ ಸಾಕ್ಷ್ಯ ಕಾಯ್ದೆ ಜುಲೈ 1ರಿಂದ ಅನುಷ್ಠಾನಕ್ಕೆ ಬರಲಿವೆ.
'ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯು ತನಿಖಾ ಸಂಸ್ಥೆಗಳು ನಡೆಸುವ ಶೋಧ ಹಾಗೂ ವಶಪಡಿಸಿಕೊಳ್ಳುವ ಪ್ರಕ್ರಿಯೆಯ ವಿಡಿಯೊ ಚಿತ್ರೀಕರಣ ಮಾಡುವುದನ್ನು ಕಡ್ಡಾಯಗೊಳಿಸಿವೆ. ಏಳು ವರ್ಷಗಳಿಗಿಂತ ಹೆಚ್ಚಿನ ಅವಧಿಗೆ ಶಿಕ್ಷೆ ವಿಧಿಸಲು ಅವಕಾಶವಿರುವ ಅಪರಾಧಗಳು ನಡೆದ ಸ್ಥಳದಲ್ಲಿ ವಿಧಿವಿಜ್ಞಾನ ತಜ್ಞರು ಇರುವುದನ್ನು ಕಡ್ಡಾಯಗೊಳಿಸಲಾಗಿದೆ. ಶೋಧ ಮತ್ತು ವಶಪಡಿಸಿಕೊಳ್ಳುವ ಪ್ರಕ್ರಿಯೆಯ ವಿಡಿಯೊ ಚಿತ್ರೀಕರಣವು ಪ್ರಾಸಿಕ್ಯೂಷನ್ ಕಡೆಯವರಿಗೆ ಪ್ರಮುಖ ಅಸ್ತ್ರವಾಗಲಿದೆ. ಹಾಗೆಯೇ ಇದು ನಾಗರಿಕರ ಸ್ವಾತಂತ್ರ್ಯವನ್ನು ಕಾಪಾಡಲು ಕೂಡ ನೆರವಾಗಲಿದೆ' ಎಂದು ಸಿಜೆಐ ಹೇಳಿದರು.
'ನಾವು ನಮ್ಮ ವಿಧಿವಿಜ್ಞಾನ ತಜ್ಞರ ಸಾಮರ್ಥ್ಯ ಹೆಚ್ಚಿಸಲು, ತನಿಖಾಧಿಕಾರಿಗಳಿಗೆ ತರಬೇತಿ ಒದಗಿಸಲು ಹೆಚ್ಚಿನ ಹೂಡಿಕೆ ಮಾಡಬೇಕಾಗಿದೆ. ಹಾಗೆಯೇ, ನಮ್ಮ ನ್ಯಾಯಾಲಯಗಳ ವ್ಯವಸ್ಥೆಯ ಮೇಲೆಯೂ ಹೂಡಿಕೆ ಮಾಡಬೇಕಾಗಿದೆ. ಈ ಹೂಡಿಕೆಗಳನ್ನು ಆದಷ್ಟು ಬೇಗ ಮಾಡಿದಾಗ, ಹೊಸ ಕಾನೂನುಗಳು ಒಳ್ಳೆಯ ಪರಿಣಾಮವನ್ನು ಬೀರುತ್ತವೆ' ಎಂದು ಅವರು ಅಭಿಪ್ರಾಯಪಟ್ಟರು.