ಕಾಸರಗೋಡು: ಕಣ್ಣೂರು ಜಿಲ್ಲೆಯ ಚೆರುಕುನ್ನು ಪುನ್ನಚ್ಚೇರಿ ಪೆಟ್ರೋಲ್ ಪಂಪು ಸನಿಹ ಕಾರು ಮತ್ತು ಲಾರಿ ಮಧ್ಯೆ ನಡೆದ ಅಪಘಾತದಲ್ಲಿ ಕಾರಿನಲ್ಲಿದ್ದ ಕಾಸರಗೋಡು ನಿವಾಸಿಗಳಾದ ಒಂದೇ ಕುಟುಂಬದ ಐದು ಮಂದಿ ದಾರುಣವಾಗಿ ಮೃತಪಟ್ಟಿದ್ದಾರೆ. ಮೃತಪಟ್ಟವರಲ್ಲಿ ಬಾಲಕನೂ ಒಳಗೊಂಡಿದ್ದಾನೆ.
ಸೋಮವಾರ ತಡರಾತ್ರಿ ಅಪಘಾತ ನಡೆದಿದ್ದು, ಕಾಸರಗೋಡು ಜಿಲ್ಲೆಯ ಚಿತ್ತಾರಿಕಲ್ ಮಂಟಪಂ ಚೂರಿಕ್ಕಾಡ್ ನಿವಾಸಿ ಸುಧಾಕರನ್(52), ಸುಧಾಕರನ್ ಅವರ ಪತ್ನಿ ಅಜಿತಾ(35), ಅಜಿತಾ ಅವರ ತಂದೆ ಪುತ್ತೂರ್‍ಕೋಯಮ್ಮಲ್ ನಿವಾಸಿ ಕೃಷ್ಣನ್(65), ಅಜಿತಾ ಅವರ ಸಹೋದರ ಅಜಿತ್ ಎಂಬವರ ಪುತ್ರ ಆಕಾಶ್(8) ಹಾಗೂ ಕಾಲಿಚ್ಚಾನಡ್ಕ ಶಾಸ್ತಾಂಪಾರ ಶೀಶೈಲ ನಿವಾಸಿ ಕೆ.ಎನ್ ಪದ್ಮಕುಮಾರ್(59)ಮೃತಪಟ್ಟವರು.
ಕಣ್ಣೂರಿನಿಂದ ಕಾಞಂಗಾಡು ಭಾಗಕ್ಕೆ ಸಂಚರಿಸುತ್ತಿದ್ದ ಕಾರು ಹಾಗೂ ಎದುರಿನಿಂದ ಆಗಮಿಸಿದ ಗ್ಯಾಸ್ ಸಿಲಿಂಡರ್ ಸಾಗಾಟದ ಲಾರಿ ಮಧ್ಯೆ ಡಿಕ್ಕಿ ಸಂಭವಿಸಿದೆ. ಕಾರಿನ ಬಾನೆಟ್ ಸಂಪೂರ್ಣ ಲಾರಿಯ ತಳಭಾಗದಲ್ಲಿ ಸಿಲುಕಿಕೊಂಡಿತ್ತು. ಸಂಪೂರ್ಣ ನಜ್ಜುಗುಜ್ಜಾಗಿದ್ದ ಕಾರಿನೊಳಗೆ ಸಿಲುಕಿಕೊಂಡಿದ್ದವರನ್ನು ಅತ್ಯಂತ ಸಾಹಸಕರ ರೀತಿಯಲ್ಲಿ ಹೊರತೆಗೆಯಲಾಗಿದೆ. ಕಾರಿನಲ್ಲಿದ್ದವರಲ್ಲಿ ನಾಲ್ಕು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದರೆ, ಬಾಲಕ ಆಕಾಶ್ ಆಸ್ಪತ್ರೆ ಹಾದಿ ಮಧ್ಯೆ ಮೃತಪಟ್ಟಿದ್ದಾನೆ. ಅಪಘಾತದ ಸಂದರ್ಭ ಕೆ.ಎನ್ ಪದ್ಮಕುಮಾರ್ ಕಾರು ಚಲಾಯಿಸುತ್ತಿದ್ದರು. ತಾಸುಗಳ ಕಾಳ ವಾಹನ ಸಂಚಾರ ಸಥಗಿತಗೊಂಡಿದ್ದು, ಊರವರು, ಪೊಲೀಸ್ ಹಾಗೂ ಅಗ್ನಿಶಾಮಕ ದಳದ ಕಾರ್ಯಾಚರಣೆಯಿಂದ ವಾಹನ ತೆರವುಗೊಳಿಸಿದ ನಂತರ ಸಂಚಾರ ಸುಗಮಗೊಳಿಸಲಾಯಿತು.