ಲೇಖಕ ಶಿವ್ ಖೇರಾ ಅವರು ಈ ಸಂಬಂಧ ಸುಪ್ರೀಂ ಕೋರ್ಟ್‌ನಲ್ಲಿ ಪಿಐಎಲ್ ಸಲ್ಲಿಸಿದ್ದಾರೆ. ಅವರ ಪರ ಹಿರಿಯ ವಕೀಲ ಗೋಪಾಲ್ ಶಂಕರನಾರಾಯಣನ್ ವಾದ ಮಂಡಿಸಿದರು.
ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ.ಬಿ.ಪರ್ದಿವಾಲಾ, ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠವು, ಈ ಅರ್ಜಿ ಕುರಿತು ಚುನಾವಣಾ ಅಯೋಗಕ್ಕೆ ನೋಟಿಸ್ ಜಾರಿ ಮಾಡಿತು.
ಆರಂಭದಲ್ಲಿ ಈ ಪಿಐಎಲ್ ಅನ್ನು ಪರಿಗಣಿಸಲು ಆಸಕ್ತಿ ಹೊಂದಿರದ ಪೀಠವು, ಬಳಿಕ 'ಇದು ಚುನಾವಣಾ ಪ್ರಕ್ರಿಯೆ ಕುರಿತ ವಿಷಯವಾಗಿದ್ದು, ಆಯೋಗ ಏನು ಹೇಳುತ್ತದೆ ನೋಡೋಣ' ಎಂದು ಹೇಳಿತು.
ಗುಜರಾತ್‌ನ ಸೂರತ್‌ನಲ್ಲಿ ನಡೆದ ಬೆಳವಣಿಗೆಯನ್ನು ಗಮನದಲ್ಲಿ ಇಟ್ಟುಕೊಂಡರೆ, ಈ ಅರ್ಜಿಯ ಮಹತ್ವ ತಿಳಿಯುತ್ತದೆ. ಸೂರತ್‌ನಲ್ಲಿ ಕೆಲ ಅಭ್ಯರ್ಥಿಗಳ ನಾಮಪತ್ರ ತಿರಸ್ಕೃತವಾದವು. ಕೆಲವರು ಸ್ಪರ್ಧೆಯಿಂದ ಹಿಂದೆ ಸರಿದರು. ಇದರ ಪರಿಣಾಮ ಬಿಜೆಪಿ ಅಭ್ಯರ್ಥಿಯನ್ನು ವಿಜಯಶಾಲಿ ಎಂದು ಘೋಷಿಸಲಾಯಿತು ಎಂದು ಅವರು ತಿಳಿಸಿದರು.
ನೋಟಾಕ್ಕಿಂತ ಕಡಿಮೆ ಮತಗಳನ್ನು ಪಡೆದ ಅಭ್ಯರ್ಥಿಗಳನ್ನು ಐದು ವರ್ಷಗಳ ಅವಧಿಗೆ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸದಂತೆ ಡಿಬಾರ್ ಮಾಡುವುದಕ್ಕೆ ಪೂರಕವಾಗಿ ನಿಯಮಗಳನ್ನು ರೂಪಿಸಲು ಚುನಾವಣಾ ಆಯೋಗಕ್ಕೆ ನಿರ್ದೇಶಿಸುವಂತೆಯೂ ಪಿಐಎಲ್ ಕೋರಿದೆ. 2013ರಲ್ಲಿ ಸುಪ್ರೀಂ ಕೋರ್ಟ್ ತೀರ್ಪಿನ ಅನ್ವಯ ಚುನಾವಣೆಯಲ್ಲಿ ಮತದಾರರಿಗೆ 'ನೋಟಾ' ಆಯ್ಕೆಯನ್ನು ಒದಗಿಸಲಾಗಿದೆ.