ಕಾಸರಗೋಡು: ಕುಡಿಯುವ ನೀರಿನ ಮೂಲಗಳನ್ನು ವಾಣಿಜ್ಯ ಮತ್ತು ಕೃಷಿ ಉದ್ದೇಶಗಳಿಗೆ ಬಳಸಬಾರದು ಮತ್ತು ಕುಡಿಯುವ ನೀರು ವಿತರಣೆ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಜಿಲ್ಲಾಧಿಕಾರಿ ಕೆ.ಇನ್ಬಾಶೇಖರ್ ತಿಳಿಸಿದ್ದಾರೆ.
ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಅವಲೋಕನ ನಡೆಸಲು ಪಂಚಾಯಿತಿ ಹಾಗೂ ನಗರಸಭೆ ಕಾರ್ಯದರ್ಶಿಗಳ ಸಭೆಯಲ್ಲಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಿಲ್ಲ. ಈಬಗ್ಗೆ ಯಾವುದೇ ಆತಂಕ ಇಲ್ಲ. ಬಾವಿಕ್ಕೆರೆ ಅಣೆಕಟ್ಟಿನಲ್ಲಿ ಮೇ 31ರವರೆಗೆ ಅಗತ್ಯ ನೀರು ದಾಸ್ತಾನಿದೆ. ಜಿಲ್ಲೆಯಲ್ಲಿ ಅಂತರ್ಜಲದ ತೀವ್ರ ಕೊರತೆ ಇಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದರು. ಮತದಾನ ಕೇಂದ್ರಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿ, ಯಾವುದೇ ಸಮಸ್ಯೆ ಇಲ್ಲದೆ ಮತದಾನ ಪ್ರಕ್ರಿಯೆ ನಡೆಯುವಂತೆ ಕಾರ್ಯಾಚರಿಸಲು ಕಾರ್ಯದರ್ಶಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.
ಎಡಿಎಂ ಕೆ.ವಿ.ಶ್ರುತಿ, ಸ್ಥಳೀಯಾಡಳಿತ ಸಂಸ್ಥೆಗಳ ಉಪ ನಿರ್ದೇಶಕ ಜೇಸನ್ ಮ್ಯಾಥ್ಯೂ ಉಪಸ್ಥಿತರಿದ್ದರು.
ಕಂಟ್ರೋಲ್ ರೂಮ್:
ಕುಡಿಯುವ ನೀರಿನ ಸಮಸ್ಯೆಗೆ ಸಂಬಂಧಿಸಿದ ಸಾರ್ವಜನಿಕ ದೂರುಗಳನ್ನು ತಿಳಿಸಲು ಕಾಸರಗೋಡು ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಂಟ್ರೋಲ್ ರೂಮ್ ತೆರೆಯಲಾಗಿದೆ. ದೂರುಗಳಿದ್ದಲ್ಲಿ ದೂರವಾಣಿ ಸಂಖ್ಯೆ(04994 257700, 9446601700)ಗೆ ಕರೆ ಮಾಡುವಂತೆ ಪ್ರಕಟಣೆ ತಿಳಿಸಿದೆ.