ನವದೆಹಲಿ: ಮೀಸಲಾತಿ ಕುರಿತ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆಯ ತಿರುಚಿದ ವಿಡಿಯೊ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಅವರಿಗೆ ಮೇ 1ರಂದು ವಿಚಾರಣೆಗೆ ಹಾಜರಾಗಿ ಹೇಳಿಕೆ ನೀಡುವಂತೆ ದೆಹಲಿ ಪೊಲೀಸರು ಸೋಮವಾರ ಸೂಚಿಸಿದ್ದಾರೆ.
ತಿರುಚಿದ ಈ ನಕಲಿ ವಿಡಿಯೊ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ರೇವಂತ್ ರೆಡ್ಡಿ ಸೇರಿದಂತೆ ತೆಲಂಗಾಣ ಕಾಂಗ್ರೆಸ್‌ನ ಐವರು ನಾಯಕರಿಗೆ ದೆಹಲಿ ಪೊಲೀಸರು ಸಮನ್ಸ್ ನೀಡಿದ್ದಾರೆ ಎಂದು ಮೂಲಗಳು ಹೇಳಿವೆ.
ರೇವಂತ್ ರೆಡ್ಡಿ ಅವರು 'ಎಕ್ಸ್'ನಲ್ಲಿ ವಿಡಿಯೊ ಹಂಚಿಕೊಂಡಿದ್ದರು. ವಿಡಿಯೊ ಪೋಸ್ಟ್ ಮಾಡಿದ ಮೊಬೈಲ್ ಫೋನ್ ಸೇರಿ ಎಲೆಕ್ಟ್ರಾನಿಕ್ ಸಾಧನಗಳನ್ನು ತನಿಖೆ ವೇಳೆ ಹಾಜರುಪಡಿಸಲು ಪೊಲೀಸರು ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
'ಗೃಹ ಸಚಿವಾಲಯ ಅಧೀನದ ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರದ (ಐ4ಸಿ) ಡೆಪ್ಯೂಟಿ ಕಮಾಂಡಂಟ್ ಸಿಂಕು ಶರಣ್ ಸಿಂಗ್ ಅವರು 'ಸಾರ್ವಜನಿಕ ಶಾಂತಿ ಮತ್ತು ಸಾರ್ವಜನಿಕ ಸುವ್ಯವಸ್ಥೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿರುವ, ಸಮುದಾಯಗಳ ನಡುವೆ ಸಂಘರ್ಷ ಉಂಟುಮಾಡುವ ಉದ್ದೇಶದಿಂದ ಕೆಲವು ತಿರುಚಿದ ವಿಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡಲಾಗುತ್ತಿದೆ' ಎಂದು ದೂರು ನೀಡಿದ್ದರು. ಇದಕ್ಕೆ ಸಂಬಂಧಿಸಿದ ವಿಡಿಯೊಗಳ ಲಿಂಕ್‌ಗಳನ್ನು ಸಹ ದೆಹಲಿ ಪೊಲೀಸರೊಂದಿಗೆ ಸಿಂಗ್ ಹಂಚಿಕೊಂಡಿದ್ದಾರೆ.
ಈ ದೂರು ಆಧರಿಸಿ ದೆಹಲಿ ಪೊಲೀಸರ ವಿಶೇಷ ಘಟಕವು ಭಾರತೀಯ ದಂಡ ಸಂಹಿತೆ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದೆ.
ಧಾರ್ಮಿಕ ನೆಲೆಯಲ್ಲಿ ಮುಸ್ಲಿಮರ ಮೀಸಲಾತಿ ರದ್ದುಪಡಿಸಲು ಬದ್ಧವೆಂದು ಅಮಿತ್ ಶಾ ಅವರು ತೆಲಂಗಾಣದಲ್ಲಿ ನೀಡಿದ್ದ ಹೇಳಿಕೆಯನ್ನು, ಅವರು ಎಲ್ಲ ಮೀಸಲಾತಿಯನ್ನು ರದ್ದುಗೊಳಿಸುವುದಾಗಿ ಪ್ರತಿಪಾದಿಸುತ್ತಿದ್ದಾರೆ ಎಂದು ಬಿಂಬಿಸುವಂತೆ ಬದಲಾಯಿಸಿ ತಿರುಚಿದ ವಿಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಲಾಗಿದೆ.
ಕಾಂಗ್ರೆಸ್ ವಿರುದ್ಧ ಕ್ರಮಕ್ಕೆ ಬಿಜೆಪಿ ಆಗ್ರಹ
ನವದೆಹಲಿ (PTI): ಚುನಾವಣಾ ಪ್ರಕ್ರಿಯೆಯ ಹಳಿತಪ್ಪಿಸಲು ಗೃಹ ಸಚಿವ ಅಮಿತ್ ಶಾ ಅವರ 'ಡೀಪ್ ಫೇಕ್ ಮತ್ತು ತಿರುಚಿದ' ವಿಡಿಯೊವನ್ನು ಕಾಂಗ್ರೆಸ್ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರ ಮಾಡಿದೆ ಎಂದು ಬಿಜೆಪಿ ಆರೋಪಿಸಿ ಸೋಮವಾರ ಕಾಂಗ್ರೆಸ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದೆ.
ಕಾಂಗ್ರೆಸ್ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಬಿಜೆಪಿ ನಾಯಕರು ಒತ್ತಾಯಿಸಿದ್ದಾರೆ. ಹಾಗೆಯೇ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ಪಕ್ಷವು ಹಿಂಸಾಚಾರವನ್ನು ಅಸ್ತ್ರವಾಗಿ ಬಳಸುತ್ತಿದೆ ಎಂದು ಆರೋಪಿಸಿ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಮತ್ತು ಬಿಜೆಪಿ ರಾಷ್ಟ್ರೀಯ ಮಾಧ್ಯಮ ವಿಭಾಗದ ಉಸ್ತುವಾರಿ ಅನಿಲ್ ಬಲೂನಿ ಅವರನ್ನೊಳಗೊಂಡ ಬಿಜೆಪಿ ನಿಯೋಗವು ತೃಣಮೂಲ ಕಾಂಗ್ರೆಸ್ (ಟಿಎಂಸಿ) ವಿರುದ್ಧವು ದೂರು ನೀಡಿದೆ.
ಚುನಾವಣಾ ಆಯೋಗದ ಅಧಿಕಾರಿಗಳನ್ನು ಭೇಟಿ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಅಶ್ವಿನಿ ವೈಷ್ಣವ್ 'ಕಾಂಗ್ರೆಸ್ ನಕಲಿ ಮತ್ತು ತಿರುಚಿದ ವಿಡಿಯೊ ಮೂಲಕ ಚುನಾವಣಾ ಪ್ರಕ್ರಿಯೆಯನ್ನು ಸಂಪೂರ್ಣ ಹಳಿತಪ್ಪಿಸಲು ಬಯಸಿದೆ. ಇದರ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದೇವೆ. ಕಾಂಗ್ರೆಸ್ ಸಾಮಾಜಿಕ ಮಾಧ್ಯಮಗಳ ತನ್ನ ಅಧಿಕೃತ ಖಾತೆಯಲ್ಲಿ ನಕಲಿ ವಿಡಿಯೊ ಹಂಚುವ ಮಾಡುವ ಮೂಲಕ ಜನರಲ್ಲಿ ಗೊಂದಲ ಮೂಡಿಸಲು ಪ್ರಯತ್ನಿಸಿದೆ' ಎಂದು ಅವರು ತಿಳಿಸಿದರು.