ನವದೆಹಲಿ: ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧಿತರಾಗಿರುವ ಅರವಿಂದ ಕೇಜ್ರಿವಾಲ್ ಅವರನ್ನು ದೆಹಲಿ ಮುಖ್ಯಮಂತ್ರಿ ಸ್ಥಾನದಿಂದ ವಜಾಗೊಳಿಸುವಂತೆ ಕೋರಿ ಪದೇ ಪದೇ ಅರ್ಜಿ ಸಲ್ಲಿಸುತ್ತಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ದೆಹಲಿ ಹೈಕೋರ್ಟ್, ಇದೇನು ಜೇಮ್ಸ್ ಬಾಂಡ್ ಸೀಕ್ವೆಲ್ ಅಲ್ಲ ಎಂದು ಕಿಡಿಕಾರಿದೆ.
ಪ್ರಕರಣದ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಮನಮೋಹನ್ ಮತ್ತು ನ್ಯಾಯಮೂರ್ತಿ ಮನ್ಮೀತ್ ಪಿ. ಎಸ್. ಅರೋರಾ ಅವರಿದ್ದ ವಿಭಾಗೀಯ ಪೀಠವು, ಮಾಜಿ ಎಎಪಿ ಶಾಸಕನೂ ಆಗಿರುವ ಅರ್ಜಿದಾರ ಸಂದೀಪ್ ಕುಮಾರ್ ಅವರಿಗೆ ₹50 ಸಾವಿರ ದಂಡ ವಿಧಿಸಿದೆ.
'ಒಂದೊಂದೇ ಭಾಗಗಳನ್ನು ಹೊಂದಿರುವುದಕ್ಕೆ ಇದೇನು ಜೇಮ್ಸ್ ಬಾಂಡ್ ಸಿನಿಮಾದ ಸೀಕ್ವೆಲ್ ಅಲ್ಲ. ಈ ವಿಚಾರವಾಗಿ ಏನು ಕ್ರಮಕೈಗೊಳ್ಳಬೇಕೆಂಬುವುದನ್ನು ದೆಹಲಿಯ ಲೆಫ್ಟಿನಂಟ್ ಗವರ್ನರ್ ನಿರ್ಧರಿಸುತ್ತಾರೆ. ರಾಜಕೀಯ ಉದ್ದೇಶದಿಂದ ನೀವು ಇಲ್ಲಿಗೆ ಬಂದಿದ್ದೀರಿ ಅಷ್ಟೇ' ಎಂದು ಪೀಠ ಅರ್ಜಿದಾರರ ವಿರುದ್ಧ ಕಿಡಿಕಾರಿದೆ.
ರಾಷ್ಟ್ರ ರಾಜಧಾನಿಯಲ್ಲಿ ರಾಜ್ಯಪಾಲರ ಆಡಳಿತವನ್ನು ಹೇರಲು ಸಾಧ್ಯವಿಲ್ಲ ಎಂಬುವುದನ್ನು ನ್ಯಾಯಾಲಯವು ಇದೇ ವೇಳೆ ಪುನರುಚ್ಚರಿಸಿತು.
ಕೇಜ್ರಿವಾಲ್ ವಜಾಗೊಳಿಸುವಂತೆ ಮಾರ್ಚ್ 28ರಂದು ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿತ್ತು. 'ಈ ವಿಚಾರದಲ್ಲಿ ನ್ಯಾಯಾಂಗವು ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ. ಸಾಂವಿಧಾನಿಕ ವೈಫಲ್ಯ ಕಂಡುಬಂದಲ್ಲಿ ಕಾರ್ಯಾಂಗವು ಅದನ್ನು ಸರಿಪಡಿಸುತ್ತದೆ' ಎಂದು ಅದು ಹೇಳಿತ್ತು.
ಏಪ್ರಿಲ್ 4ರಂದು ಮತ್ತೊಂದು ಪಿಐಎಲ್ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಾಲಯ, ಮುಖ್ಯಮಂತ್ರಿಯಾಗಿ ಮುಂದುವರಿಯುವುದು ಕೇಜ್ರಿವಾಲ್ ಅವರ ವೈಯಕ್ತಿಕ ಆಯ್ಕೆಯಾಗಿದ್ದು, ಲೆಫ್ಟಿನೆಂಟ್ ಗವರ್ನರ್ ಅವರನ್ನು ಸಂಪರ್ಕಿಸುವಂತೆ ಅರ್ಜಿದಾರರಿಗೆ ತಿಳಿಸಿತ್ತು.